Saturday, 14th December 2024

ಮಹಿಳಾ ಹಕ್ಕುಗಳ ಕಾರ‍್ಯಕರ್ತೆ ಯೋಗಿತಾ

ಭಾರತದಲ್ಲಿ ಅತ್ಯಾಚಾರದಂತಹ ಭೀಕರ ಅಪರಾಧಗಳನ್ನು ತಡೆಗಟ್ಟಲು ಪ್ರತಿ ಮಹಿಳೆಯು ಪ್ರಯತ್ನವನ್ನು ಮಾಡಬೇಕು. ಮಕ್ಕಳಿಗೆ ಶಿಕ್ಷಣ ಅವಶ್ಯ. ಆಕ್ರಮಣದ ವಿರುದ್ಧ ಮಹಿಳೆಯರು ನಿಲ್ಲಬೇಕೆಂದು ಯೋಗಿತಾ ಹೇಳುತ್ತಾರೆ. ಬದುಕುಳಿದವರಿಗೆ ಸಹಾಯ ಮಾಡುವುದು ಮುಖ್ಯ. ಆದರೆ ಅತ್ಯಾಚಾರ ತಡೆಗಟ್ಟುವಲ್ಲಿ ಕೆಲಸ ಮಾಡುವುದು ಅಷ್ಟೇ ಕಡ್ಡಾಯವಾಗಿದೆ. ಪ್ರತಿಯೊಬ್ಬರು ಈ ಕಾರ‍್ಯದಲ್ಲಿ ಕೈ ಜೋಡಿಸದಿದ್ದರೆ, ಇವು ಕೊನೆಯವರೆಗೂ ನಿಲ್ಲುವುದಿಲ್ಲ.

ಸುರೇಶ ಗುದಗನವರ

ಮಹಿಳಾ ಸಬಲೀಕರಣ, ಲಿಂಗ ಸಂವೇದನೆ, ಮಹಿಳೆಯರು ಮತ್ತು ಮಕ್ಕಳ ಲೈಂಗಿಕ ಕಿರುಕುಳ ಸೇರಿದಂತೆ ವಿವಿಧ ಕಾರಣಗಳಿಗಾಗಿ ಜೀವನವನ್ನೇ ಸಮರ್ಪಿಸಿ ಕೊಂಡವರು ಯೋಗಿತಾ ಭಯಾನಾ, ಅವರು. ಕಳೆದ ೧೪ ವರ್ಷಗಳಿಂದ ತಮ್ಮ ಸಾಮಾಜಿಕ ಕಾರ್ಯ ಮತ್ತು ಮಹಿಳಾ ಹಕ್ಕುಗಳ ಕ್ಷೇತ್ರದಲ್ಲಿ ಕ್ರಿಯಾಶೀಲತೆಗೆ ಹೆಸರುವಾಸಿಯಾಗಿದ್ದಾರೆ.

ದೆಹಲಿ ಮೂಲದವರಾದ ಯೋಗಿತಾ ಭಯಾನಾ ಅವರು ಗುರುಗೋವಿಂದ ಸಿಂಗ್, ವಿಶ್ವ ವಿದ್ಯಾಲಯದಿಂದ ವಿಪತ್ತು ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಂತರ ೨೦೦೨ರಲ್ಲಿ ಕಿಂಗ್‌ಫಿಷರ್ ಏರ್‌ಲೈನ್‌ ನಲ್ಲಿ ಉದ್ಯೋಗವನ್ನು ಆರಂಭಿಸಿದರು. ಅವರು ವಿರಾಮದ ದಿನಗಳಲ್ಲಿ ಚಲನಚಿತ್ರವನ್ನು ನೋಡಿ ಹೊರ ಬರುತ್ತಿದ್ದಾಗ, ಭೀಕರ ರಸ್ತೆ ಅ-ಘಾತದಲ್ಲಿ ರಕ್ತದ ಮಡುವಿನಲ್ಲಿ ಯಾರೋ ಒಬ್ಬರು ರಸ್ತೆಯ ಮೇಲೆ ಬಿದ್ದಿದ್ದರು. ಆ ಸಮಯದಲ್ಲಿ ಯಾರೂ ಅವರನ್ನು ಎತ್ತಲು ಸಿದ್ಧರಿಲ್ಲದಿದ್ದಾಗ ಸ್ನೇಹಿತನ ಸಹಾಯದೊಂದಿಗೆ ಆಸ್ಪತ್ರೆಗೆ ಕರೆದೊಯ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವಿಳಂಬವಾಯಿತು. ಅವರ ಕುಟುಂಬಕ್ಕೆ ಕರೆ ಮಾಡಿದರು. ಆದರೆ ಅವರು ಬರುವುದರೊಳಗೆ ಸಾವನ್ನಪ್ಪಿದರು.

ಈ ಘಟನೆಯಿಂದ ಯೋಗಿತಾ ಅವರಿಗೆ ರಾತ್ರಿಯಿಡಿ ನಿದ್ರೆ ಬರಲಿಲ್ಲ. ಈ ದೇಶದಲ್ಲಿ ಬಡವರ ಬದುಕೇನು? ಎಂದು ತಮ್ಮನ್ನು ತಾವೇ ಪ್ರಶ್ನಿಸತೊಡಗಿದರು. ಈ ಘಟನೆ ಅವರ ಜೀವನದಲ್ಲಿ ಮಹತ್ವದ ತಿರುವನ್ನು ಪಡೆಯಿತು. ಅಂದೇ ಸಮಾಜದ ಸುಧಾರಣೆಗಳ ಬಗ್ಗೆ ಏನಾದರೂ ಮಾಡಬೇಕೆಂದು ನಿರ್ಧರಿಸಿದರು. ಹಾಗೆಯೇ ೨೦೦೭ರಲ್ಲಿ ಅವರು ಸುಧಾರಣೆಗಳಿಗಾಗಿ ಕೆಲಸ ಮಾಡಲು ತಮ್ಮ ಕೆಲಸವನ್ನು ತೊರೆದರು. ನಂತರ ರಸ್ತೆ ಅಪಘಾತಗಳ ಸಂತ್ರಸ್ತರಿಗೆ ಸಹಾಯ ಮಾಡಲು ದಾಸ್ ಚಾರಿಟೇಬಲ್ ಫೌಂಡೇಶನ್ ಪ್ರಾರಂಭಿಸಿ ದರು. ಕ್ರಮೇಣ ಪೀಪಲ್ ಅಗೇನಸ್ಟ್ ರೇಪ್ ಇನ್ ಇಂಡಿಯಾ ಸಂಸ್ಥೆಯನ್ನು ಪ್ರಾರಂಭಿಸಿದರು. ಅತ್ಯಾಚಾರಕ್ಕೊಳ ಗಾದ ಸಂತ್ರಸ್ಥರಿಗೆ ಮತ್ತು ಅವರ ಕುಟುಂಬಗಳಿಗೆ ಪುನರ್ವಸತಿ, ನ್ಯಾಯ ಮತ್ತು ಸುರಕ್ಷತೆಯನ್ನು ಒದಗಿಸುವುದು ಈ ಸಂಸ್ಥೆಯ ಉದ್ದೇಶವಾಗಿದೆ.

೨೦೧೨ರಲ್ಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರ ಭಾರತದಾದ್ಯಾಂತ ಅಪಘಾತವನ್ನು ಉಂಟು ಮಾಡಿತು. ಈ ಪ್ರಕರಣದಲ್ಲಿ ನ್ಯಾಯವನ್ನು ಒದಗಿಸುವ ಬಗ್ಗೆ
ನಿರ್ಧರಿಸಿದರು. ಈ ಪ್ರಕರಣದಲ್ಲಿಯ ಅಪರಾಧಿಗಳನ್ನು ೨೦೨೦ರಲ್ಲಿ ಗಲ್ಲಿಗೇರಿಸಲಾಯಿತು. ಅವರು ನಿರ್ಭಯಾ ಪ್ರಕರಣವನ್ನು ಕೈಗೆತ್ತಿಕೊಂಡಾಗ ಎಲ್ಲಾ ದಿನಗಳನ್ನು ನ್ಯಾಯಾಲಯದಲ್ಲಿಯೇ ಕಳೆಯುತ್ತಿದ್ದರು. ೨೦೧೫ರಲ್ಲಿ ಬಾಲಾಪರಾಧಿ ಆರೋಪಿ ಜೈಲಿನಿಂದ ಬಿಡುಗಡೆಯ ವಿರುದ್ಧ ಪ್ರತಿಭಟನೆಯನ್ನು ಸಂಘಟಿಸಿ ದರು. ಅವರು ಬಂಧನಕ್ಕೊಳ ಪಟ್ಟರು. ಈ ಅಭಿಯಾನವು ಬಾಲಾಪರಾಧಿ ಅತ್ಯಾಚಾರಿಗಳ ಕಾನೂನಿನ ವಯಸ್ಸಿನ ಮಿತಿಯನ್ನು ೧೫ರಿಂದ ೧೬ ವರ್ಷಕ್ಕೆ ಮಾರ್ಪಟ್ಟಿತು. ಬಾಲಪರಾಧಿ ವಯಸ್ಸಿನ ಮಿತಿಯನ್ನು ಬದಲಾಯಿಸುವ ಅಭಿಯಾನದಲ್ಲಿ ಯೋಗಿತಾ ಸಕ್ರಿಯ ಪಾತ್ರ ವಹಿಸಿದರು.

ಭಾರತದಲ್ಲಿ ಅತ್ಯಾಚಾರದಂತಹ ಭೀಕರ ಅಪರಾಧಗಳನ್ನು ತಡೆಗಟ್ಟಲು ಪ್ರತಿಯೊಬ್ಬ ಮಹಿಳೆಯು ಪ್ರಯತ್ನವನ್ನು ಮಾಡಬೇಕು. ಮಕ್ಕಳಿಗೆ ಶಿಕ್ಷಣ ಅವಶ್ಯ. ಆಕ್ರಮಣ ವಿರುದ್ಧ ಮಹಿಳೆಯರು ನಿಲ್ಲಬೇಕೆಂದು ಯೋಗಿತಾ ಹೇಳುತ್ತಾರೆ. ಬದುಕುಳಿದವರಿಗೆ ಸಹಾಯ ಮಾಡುವುದು ಮುಖ್ಯ. ಆದರೆ ಅತ್ಯಾಚಾರ ತಡೆಗಟ್ಟುವಲ್ಲಿ ಕೆಲಸ ಮಾಡುವುದು ಅಷ್ಟೇ ಕಡ್ಡಾಯವಾಗಿದೆ. ಪ್ರತಿಯೊಬ್ಬರು ಈ ಕಾರ‍್ಯದಲ್ಲಿ ಕೈ ಜೋಡಿಸದಿದ್ದರೆ, ಇವು ಕೊನೆಯವರೆಗೂ ಮುಂದುವರೆಯುತ್ತವೆ ಎಂದು ಹೇಳುತ್ತಾರೆ.

ಮಹಿಳೆಯರಿಗೆ ಸ್ವಯಂ ರಕ್ಷಣೆ ಕಲೆಯ ತರಬೇತಿ ನೀಡುವ ಬದಲು ಪರುಷರ ಮನಸ್ಥಿತಿಯನ್ನು ಬದಲಿಸಲು ಜನರು ಪ್ರಯತ್ನಿಸಬೇಕು. ಮಹಿಳೆಯರಿಗೆ ಗೌರ ಕೊಡಬೇಕು ಎಂದು ಪುರುಷರಿಗೆ ಕಲಿಸಿದರೆ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕಡಿಮೆಯಾಗಬಹುದು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ಯೋಗಿತಾ.