ಮೋಹನದಾಸ ಕಿಣಿ ಕಾಪು
(ಮುಂದುವರಿದ ಭಾಗ)
ವಿವಿಧ ರೀತಿಯ ವೀಡಿಯೊ ಮಾಡಿ, ಯುಟ್ಯೂಬ್‌ಗೆ ಅಪ್‌ಲೋಡ್ ಮಾಡಿ, ಅದರಿಂದ ಹಣ ಗಳಿಸುವವರು ತುಂಬಾ ಜನರಿದ್ದಾರೆ. ವಿಡಿಯೋ ಮಾಡುವುದನ್ನೇ ಪೂರ್ಣಕಾಲೀನ ಉದ್ಯೋಗವಾಗಿಸಿಕೊಂಡವರ ಕಾರ್ಯ ವೈಖರಿ ಹೀಗಿದೆ.
* ಯಾವುದಾದರೂ ಒಂದು ನಿರ್ದಿಷ್ಟ ವಿಷಯದಲ್ಲಿ, ಅಂದರೆ ಪ್ರವಾಸಿ ತಾಣಗಳು, ಅಪರೂಪದ ಸ್ಥಳಗಳ ಕುರಿತಾದ ಮಾಹಿತಿ ನೀಡುವ ಪ್ರಪಂಚ ಪರ್ಯಟನೆಯ ವೀಡಿಯೊಗಳು. ಇವರಲ್ಲಿ ಹೊರಗಿನ ಪ್ರಪಂಚಕ್ಕೆ ನಿರ್ಬಂಧವಿರುವ ಉತ್ತರ ಕೊರಿಯಾದಂತಹ ದೇಶಗಳ ಮಾಹಿತಿ ಸಂಗ್ರಹಿಸಿ ವೀಡಿಯೊ ಮಾಡಿ ಹಾಕುವ
ವರೂ ಇರುತ್ತಾರೆ.
* ಮಹಿಳೆಯರು ವಿವಿಧ ಬಗೆಯ ಅಡುಗೆಗಳ ಬಗ್ಗೆ, ಅಲಂಕಾರಿಕ ಹವ್ಯಾಸಗಳು, ವಿದೇಶದಲ್ಲಿ ಭಾರತೀಯ ಆಹಾರ ಮತ್ತಿತರ ದಿನಬಳಕೆಯ ವಸ್ತುಗಳ ಲಭ್ಯತೆ ಕುರಿತಾದ ವಿವರಗಳಿರುವ ವೀಡಿಯೊ ಮಾಡಿ ಹಾಕುತ್ತಾರೆ. ಅಡುಗೆ ಬಗ್ಗೆ ಯಾವುದೇ ಜ್ಞಾನವಿಲ್ಲದವರು, ಇಂತಹ ವೀಡಿಯೊ ನೋಡಿ ಕಲಿತದ್ದೂ ಇದೆ.
*ಸಣ್ಣಪುಟ್ಟ ಅಸೌಖ್ಯಗಳಿಗೆ, ಮಕ್ಕಳ ಚಿಕಿತ್ಸೆ-ಲಾಲನೆ ಪಾಲನೆಗೆ ಅಗತ್ಯವಿರುವ ವಿಡಿಯೋ ಮಾಹಿತಿ.
*ವಿದೇಶದಲ್ಲಿ ಸೂಕ್ತ ಮನೆ, ಮಕ್ಕಳಿಗೆ ಶಾಲೆ, ದಿನಬಳಕೆಯ ವಸ್ತುಗಳ ಮಳಿಗೆ ಮೊದಲಾದವುಗಳ ಕುರಿತ ಮಾಹಿತಿ ಪಡೆಯುವಲ್ಲಿ ಸಹಕಾರಿ.
*ಆರೋಗ್ಯ, ಪ್ರವಾಸ್ಕ, ವ್ಯಾಪಾರ, ಬ್ಯಾಂಕಿಂಗ್ ಮತ್ತಿತರ ಕ್ಷೇತ್ರಗಳಲ್ಲಿ ನಡೆಯುವ ಮೋಸಗಳ ಕುರಿತಾದ ಮಾಹಿತಿಯಿರುವ ವೀಡಿಯೊಗಳು.
*ಒಳ್ಳೆಯ ಸಂದೇಶವಿರುವ ವೀಡಿಯೊ, ಸ್ವಯಂ ಕಲಿಕೆಯ ಹಲವು ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಾರೆ. ಯೋಗಾಭ್ಯಾಸ, ವ್ಯಾಯಾಮ ಮೊದಲಾದ ವಿಡಿಯೋಗಳನ್ನು ಕಾಲದಿಂದ ಕಾಲಕ್ಕೆ ಅಪ್ ಲೋಡ್ ಮಾಡಿ, ಅದನ್ನು ಬಹಳಷ್ಟು ಜನ ನೋಡುವಂತೆ ಮಾಡಿದರೆ, ಜಾಹೀರಾತು ಮೂಲಕ ಆದಾಯ ಗಳಿಸಬಹುದು.
ದಾರಿ ತಪ್ಪಿಸುವ ವಿಡಿಯೋಗಳು
ವೀಕ್ಷಕರನ್ನು ದಾರಿ ತಪ್ಪಿಸುವ, ಗೊಂದಲಕ್ಕೆ ಈಡು ಮಾಡುವ, ಆ ಮೂಲಕ ಹೆಚ್ಚು ನೋಡುಗರನ್ನು
ತಲುಪುವ ವಿಡಿಯೋ ನಿರ್ಮಾಪಕರ ಕಾರ್ಯವೈಖರಿ ಹೀಗಿದೆ.
*ಯುವ ನಟಿಯೊಬ್ಬರು ಮದುವೆಯ ಸುದ್ದಿ ಹೊರಬಿದ್ದ ಕೆಲವೇ ದಿನಗಳಲ್ಲಿ ಬಂದ ಹೊಸ ವೀಡಿಯೋ ಒಂದರ ಶೀರ್ಷಿಕೆ ಹೀಗಿತ್ತು: ‘ಮದುವೆಯಾದ ಒಂದೇ ತಿಂಗಳಲ್ಲಿ ಸಿಹಿಸುದ್ದಿ ನೀಡುತ್ತಾರೆ, ಅದೇನು ಗೊತ್ತಾ?’ ಆಸಕ್ತಿಯಿಂದ ಸುಮಾರು 10-15 ನಿಮಿಷದ ವೀಡಿಯೋ ನೋಡುವಷ್ಟರಲ್ಲಿ ಸಂಸ್ಥೆಗೆ ಮತ್ತು ವೀಡಿಯೊ
ಹಾಕಿದವರಿಗೆ ಆದಾಯ ತರುವ ಜಾಹೀರಾತುಗಳು ಒಂದೆರಡು ಸಲ ಮಿಂಚಿ ಮಾಯವಾಗುತ್ತದೆ. ಕೊನೆಯಲ್ಲಿ ‘ಅವರು ಚಿತ್ರವೊಂದರಲ್ಲಿ ನಟಿಸಲು ಒಪ್ಪಿ ಸಹಿ ಮಾಡಿದ್ದಾರೆ’ ಎಂಬಲ್ಲಿಗೆ ಮುಗಿಸುತ್ತಾರೆ!
* ಕೆಲವು ತಿಂಗಳ ನಂತರ ಅದೇ ನಟಿಯ ಬಗ್ಗೆ ಇನ್ನೊಂದು ವೀಡಿಯೊ: ‘ಮದುವೆಯಾದ ಒಂದು ವರ್ಷ ದೊಳಗೆ ಅವರ ಮನೆಯಲ್ಲಿ ಕಂಡು ಬಂದ ಮುದ್ದಾದ ಮಗು’. ವೀಡಿಯೊ ನೋಡುತ್ತಾ ಹೋದರೆ ಕೊನೆ ಯಲ್ಲಿ, ಅವರ ಅಣ್ಣನಿಗೆ ಗಂಡು ಮಗು ಎಂಬಲ್ಲಿಗೆ ಮುಗಿಸುತ್ತಾರೆ.
*ಹೊಸ ಸಿನಿಮಾದ ತುಣುಕನ್ನು ಮಾತ್ರ ತೋರಿಸುತ್ತಾರೆ. ಇಡೀ ಸಿನಿಮಾ ನೋಡಬೇಕಾದರೆ ಶುಲ್ಕ ಪಾವತಿ ಸುವ ಬೇರೆ ಆಪ್ ಖರೀದಿಸಬೇಕು.
*ಖ್ಯಾತ ನಟಿಯ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಎಂಬ ಶೀರ್ಷಿಕೆಯಡಿ ಆರಂಭವಾಗುವ ವೀಡಿಯೊ ಅವರು ತನ್ನ ಪತಿಗೆ ವಿಚ್ಛೇದನ ಕೊಟ್ಟು, ಬೇರೆ ಮದುವೆಯಾಗುತ್ತಿದ್ದಾರೆ, ಯಾರನ್ನು ಗೊತ್ತಾ? ಹೀಗೆ ಮುಂದು ವರಿಯುತ್ತಾ ಕೊನೆಗೆ ‘ತಮ್ಮ ಹೊಸ ಚಲನಚಿತ್ರದಲ್ಲಿ’. ಬಕ್ರಾಗಳು ಕೊನೆಯ ತನಕ ನೋಡುತ್ತಾರೆ, ಜಾಹೀ ರಾತು ಆದಾಯ ಬಂತಲ್ಲ!
ಇತ್ತೀಚೆಗೆ ಸುದ್ದಿ ಮಾಧ್ಯಮಗಳೂ, ಯೂಟ್ಯೂಬ್ ಮೂಲಕ ಪ್ರಸಾರ ಮಾಡುವುದು ಹೆಚ್ಚಾಗುತ್ತಿದೆ. ಅವರಿಗೂ ಜಾಹೀರಾತು ಮೂಲಕ ಆದಾಯ ಬರುವುದು ಒಂದು ಅನುಕೂಲವಾದರೆ, ಈಗಿನಂತೆ ಮಾಸಿಕ -ವಾರ್ಷಿಕ ಚಂದಾ ಪಾವತಿಸಿ ಟಿ.ವಿ. ನೋಡುವ ಬದಲು, ಯಾವಾಗ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿ ಕೊಳ್ಳುವ ಸ್ವಾತಂತ್ರ್ಯ ನೋಡುಗರಿಗೆ ಸಿಗುತ್ತದೆ.
ಮುಂದೊಮ್ಮೆ ಮನರಂಜನಾ ವಲಯವನ್ನು ಯೂಟ್ಯೂಬ್ ಎಂಬ ಮಾಯಾಲೋಕ ಸಂಪೂರ್ಣವಾಗಿ ಆಕ್ರಮಿಸಿಕೊಂಡರೂ ಆಶ್ಚರ್ಯವಿಲ್ಲ. ಇದನ್ನು ಮನಗಂಡೇ ಯುಟ್ಯೂಬ್‌ನವರು ಇಂದು ಪ್ರೀಮಿಯಂ ವರ್ಷನ್ ಜನಪ್ರಿಯಗೊಳಿಸಲು ಪ್ರಯತ್ನ ನಡೆಸಿದ್ದಾರೆ!