Thursday, 12th December 2024

ಅಮೇಜಾನ್‌ ಪ್ರೈಮ್‌ನಲ್ಲಿ ಯುವರತ್ನ

ಏಪ್ರಿಲ್ 1ರಂದು ಬಿಡುಗಡೆಯಾಗಿ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯ ದ ಯುವರತ್ನ ಈಗ ಅಮೇಜಾನ್ ಪ್ರೈಮ್‌ನಲ್ಲೂ ಬಿಡುಗಡೆಯಾಗಿದೆ.

ಶುಕ್ರವಾರದಿಂದ ಪ್ರೈಮ್‌ನಲ್ಲಿ ವೀಕ್ಷಣೆಗೆ ಲಭ್ಯವಿದ್ದು, 240 ದೇಶಗಳಲ್ಲಿ ಕನ್ನಡ ಹಾಗೂ ತೆಲುಗಿನಲ್ಲಿಯೂ ಚಿತ್ರವನ್ನು ವೀಕ್ಷಿಸ ಬಹುದಾಗಿದೆ. ಕಳೆದವಾರವಷ್ಟೇ ಬಿಡುಗಡೆಯಾಗಿದ್ದ ಯುವರತ್ನ ಯೂತ್‌ಫುಲ್ ಸ್ಟೋರಿ ಹೊಂದಿರುವ ಚಿತ್ರ. ಶಿಕ್ಷಣದ ಮಹತ್ವ, ಸರಕಾರಿ ಶಿಕ್ಷಣಕ್ಕೆ ಖಾಸಗೀಯವರಿಂದ ಎದುರಾಗುತ್ತಿರುವ ತೊಡರುಗಳು. ಯುವಜನತೆಯನ್ನು ಬಾಧಿಸುತ್ತಿರುವ ಡ್ರಗ್ಸ್‌ ವ್ಯಸನ, ಅದನ್ನು ತೊಡೆದಟ್ಟುವ ಪ್ರಯತ್ನ ಹೀಗೆ ಸಮಾಜಕ್ಕೆ ಅಗತ್ಯವಾದ ಕಥೆ ಚಿತ್ರದಲ್ಲಿದೆ.

ಈ ಚಿತ್ರದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಕಾಲೇಜ್ ವಿದ್ಯಾರ್ಥಿಯಾಗಿ, ರಗ್ಬಿ
ಆಟಗಾರನಾಗಿ, ಕಾಲೇಜು ಪ್ರೊಫೆಸರ್ ಆಗಿ ಹೀಗೆ ಮೂರು ಶೇಟ್‌ಗಳಲ್ಲಿ ಅಪ್ಪು ಮಿಂಚಿದ್ದಾರೆ. ಡ್ಯಾನ್ಸ್‌, ಫೈಟ್, ಚೇಸಿಂಗ್.. ಹೀಗೆ ಎಲ್ಲದರಲ್ಲೂ ಅಪ್ಪು ಯಂಗ್ ಅಂಡ್ ಎನೆರ್ಜಿಟಿಕ್ ಆಗಿ ಮಿಂಚಿದ್ದಾರೆ.

ಚಿತ್ರವನ್ನು ನೋಡಿದ ಮೇಲೆ ಅಪ್ಪುಗೆ ಅಪ್ಪುವೆ ಸಾಟಿ ಎಂಬ ಮಾತುಗಳು ಪ್ರೇಕ್ಷಕರಿಂದ ಕೇಳಿಬರುತ್ತಿವೆ. ಚಿತ್ರದ ಪವರ್ ಆಫ್ ಯೂತ್ ಹಾಡಿಗೆ ಸಂಗೀತ ಪ್ರಿಯರು ಮನಸೋತಿದ್ದಾರೆ. ಪಾಠಶಾಲಾ ಹಾಡು ಯುವರಕರ ಮನಸೂರೆಗೊಂಡಿದೆ. ಅಪ್ಪುಗೆ ಜತೆಯಾಗಿ ಸಯೇಶಾ ಸೈಗಲ್  ನಟಿಸಿದ್ದಾರೆ.

ಪ್ರಸಿದ್ಧ ಬಹುಭಾಷಾ ನಟ ಪ್ರಕಾಶ್ ರಾಜ್ ಕಾಲೇಜ್ ಪ್ರಾಂಶುಪಾಲರಾಗಿ ಅಮೋಘ ಅಭಿನಯ ತೋರಿದ್ದಾರೆ. ಈ ಪಾತ್ರದಲ್ಲಿ ಪ್ರಕಾಶ್ ರಾಜ್ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಡಾಲಿ ಧನಂಜಯ ಇಲ್ಲಿಯೂ ಖದರ್ ಖಳನಾಗಿ ಅಬ್ಬರಿಸಿದ್ದಾರೆ. ಸಾಧು ಕೋಕಿಲ ಹಾಗೂ ಕುರಿಪ್ರತಾಪ್ ಕಾಮಿಡಿ ಕಮಾಲ್ ಮಾಡಿದ್ದಾರೆ. ಉಳಿದಂತೆ ಹಿರಿಯ ನಟರಾದ ಅವಿನಾಶ್, ರಂಗಾಯಣ ರಘು, ಸಾಯಿ ಕುಮಾರ್ ಸುಧಾರಾಣಿ, ಸೋನುಗೌಡ, ದಿಗಂತ್ ಮತ್ತಿತರರು ಚಿತ್ರದ ತಾರಾಬಳದಲ್ಲಿದಾರೆ.