Friday, 20th December 2024

Champions Trophy-ʻಬಿಸಿಸಿಐ ವಿರುದ್ಧ ಪಿಸಿಬಿ ಗೆದ್ದಿದೆʼ: ಪಾಕ್ ಮಾಜಿ ನಾಯಕ ಜಾವೇದ್‌ ಮಿಯಾಂದದ್‌ ಅಚ್ಚರಿ ಹೇಳಿಕೆ!

Pakistan captain Javed Miandad Makes MASSIVE Claim After Champions Trophy 2025 Impasse Ends

ನವದೆಹಲಿ: ಮುಂಬರುವ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy) ಟೂರ್ನಿಯಲ್ಲಿ ಹೈಬ್ರಿಡ್‌ ಮಾಡೆಲ್‌ ಅನ್ನು ಅಳವಡಿಸಿಕೊಳ್ಳುವ ಬಗ್ಗೆ ಅಂತಾರಾಷ್ಟೀಯ ಕ್ರಿಕೆಟ್‌ ಕೌನ್ಸಿಲ್‌ ಮಹತ್ವದ ಹೇಳಿಕೆ ನೀಡಿದ ಬಳಿಕ ಪಾಕಿಸ್ತಾನ ಮಾಜಿ ನಾಯಕ ಜಾವೇದ್‌ ಮಿಯಾಂದದ್‌ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಎದುರು ಪಾಕಿಸ್ತಾನ ಕ್ರಿಕೆಂಟ್‌ ಮಂಡಳಿಗೆ ಸಿಕ್ಕ ಜಯ ಇದಾಗಿದೆ ಎಂದು ಮಾಜಿ ನಾಯಕ ಹೇಳಿಕೊಂಡಿದ್ದಾರೆ.

ಪಾಕಿಸ್ತಾನ ಆತಿಥ್ಯದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು ಹೈಬ್ರಿಡ್‌ ಮಾಡೆಲ್‌ನಲ್ಲಿ ನಡೆಸಬೇಕೆಂದು ಬಿಸಿಸಿಐ ಹಲವು ದಿನಗಳಿಂದ ಪಟ್ಟು ಹಿಡಿದಿತ್ತು. ಇದಕ್ಕೆ ಪಿಸಿಬಿ ವಿರೋಧಿಸಿ, ಭಾರತ ತಂಡ ಕೂಡ ಪಾಕಿಸ್ತಾನಕ್ಕೆ ಬರಬೇಕೆಂದು ಪಟ್ಟು ಹಿಡಿದಿತ್ತು. ಈ ಹಗ್ಗ ಜಗ್ಗಾಟ ಕಳೆದ ಹಲವು ತಿಂಗಳುಗಳಿಂದ ನಡೆದಿತ್ತು. ಆದರೆ, ಗುರುವಾರ ಐಸಿಸಿ, ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು ಹೈಬ್ರಿಡ್‌ ಮಾಡೆಲ್‌ನಲ್ಲಿ ನಡೆಸಲಾಗುತ್ತದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು. ಆ ಮೂಲಕ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸಲಾಗುತ್ತದೆ.

ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಪಾಕಿಸ್ತಾನ ಮಾಜಿ ನಾಯಕ ಜಾವೇದ್‌ ಜಾವೆಂದದ್‌, “ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯು ದುಡುಕಿನ ಅಥವಾ ಇತರೆ ಎಲ್ಲಾ ಮಂಡಳಿಗಳಿಂದ ಐಸಿಸಿಯಲ್ಲಿ ಪ್ರತ್ಯೇಕತೆಯನ್ನು ಎದುರಿಸುವ ಬದಲು ಸಂವೇದನಾಶೀಲ ವಿಧಾನವನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ. ಅಲ್ಲದೆ ಬಿಸಿಸಿಐಗಿಂತ ಪಿಸಿಬಿ ಮೇಲುಗೈ ಸಾಧಿಸಿದೆ,” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಿಸಿಬಿ ಸ್ಪಷ್ಟ ಸಂದೇಶವನ್ನು ರವಾನಿಸಿದೆ: ಮಿಯಾಂದದ್‌

2024 ರಿಂದ 2027ರವರೆಗೆ ಭಾರತ ಅಥವಾ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಯಾವುದೇ ಐಸಿಸಿ ಟೂರ್ನಿಯಗಳಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನಡುವಣ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಯೋಜಿಸಲಾಗುತ್ತದೆ. ಇದರ್ಥ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪಂದ್ಯಗಳನ್ನು ಆಡಲು ಭಾರತ ತಂಡ, ಪಾಕಿಸ್ತಾನಕ್ಕೆ ತೆರಳುತ್ತಿಲ್ಲ. ಇನ್ನು 2025ರ ಮಹಿಳಾ ಟಿ20ಐ ವಿಶ್ವಕಪ್‌ ಟೂರ್ನಿಯನ್ನು ಆಡಲು ಪಾಕಿಸ್ತಾನ ಮಹಿಳಾ ತಂಡ ಕೂಡ ಭಾರತಕ್ಕೆ ಪ್ರಯಾಣ ಬೆಳೆಸುವುದಿಲ್ಲ. ಅಲ್ಲದೆ 2026ರ ಪುರುಷರ ಐಸಿಸಿ ಟಿ20 ವಿಶ್ವಕಪ್‌ ಆಡಲು ಕೂಡ ಪಾಕಿಸ್ತಾನ ತಂಡ ಕೂಡ ಭಾರತಕ್ಕೆ ತೆರಳುವುದಿಲ್ಲ.

ಐಸಿಸಿ ಟೂರ್ನಿಯನ್ನು ಆಡಲು ಪಾಕಿಸ್ತಾನಕ್ಕೆ ಭಾರತ ತಂಡ ಬಂದಿಲ್ಲವಾದರೆ, ಪಿಸಿಬಿ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಪಾಕಿಸ್ತಾನ ತಂಡ ಕೂಡ ಯಾವುದೇ ಪಂದ್ಯಗಳನ್ನು ಆಡಲು ಭಾರತಕ್ಕೆ ತೆರಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

“ಪಾಕಿಸ್ತಾನ ದೀರ್ಘಾವಧಿ ಬಳಿಕ ಐಸಿಸಿಯ ದೊಡ್ಡ ಟೂರ್ನಿಗೆ ಆತಿಥ್ಯವನ್ನು ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ಬಂದಿಲ್ಲವಾದರೆ, ನಾವು ಕೂಡ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಪಿಸಿಬಿ ಕೊಟ್ಟಿದೆ. ಇದು ಬಿಸಿಸಿಐ ವಿರುದ್ಧ ಪಿಸಿಬಿಗೆ ಸಿಕ್ಕ ದೊಡ್ಡ ಗೆಲುವು,” ಎಂದು ಜಾವೇದ್‌ ಮಿಯಾಂದದ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಓದಿ: Champions Trophy Schedule: ಇನ್ನೆರಡು ದಿನದಲ್ಲಿ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಪ್ರಕಟ