Thursday, 12th December 2024

ಟೀಂ ಇಂಡಿಯಾ ಬ್ಯಾಟಿಂಗಿಗೆ ಕಂಟಕವೊಡ್ಡಿದ ಜೋಫ್ರಾ, ಡೊಮ್‌ ಬೇಸ್‌

ಚೆನ್ನೈ: ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿದೆ. ಭೋಜನ ವಿರಾಮದ ಬಳಿಕ ಒಟ್ಟು 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಇಂಗ್ಲೆಂಡ್ ತಂಡ ನೀಡಿದ 578 ರನ್ ಗಳ ಸವಾಲನ್ನು ಬೆನ್ನು ಹತ್ತಿರುವ ಭಾರತ ತಂಡ ರೋಹಿತ್ ಶರ್ಮಾ, ಶುಬ್ ಮನ್ ಗಿಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ವಿಕೆಟ್ ಕಳೆದುಕೊಂಡಿದೆ. ಇಂಗ್ಲೆಂಡ್ ಬೌಲರ್ ಗಳ ಕರಾರುವಕ್ಕಾದ ದಾಳಿಯಿಂದಾಗಿ ರೋಹಿತ್ ಶರ್ಮಾ ಆರಂಭದಲ್ಲೇ ವಿಕೆಟ್ ಒಪ್ಪಿಸಿದರು. ಆರು ರನ್ ಗಳಿಸಿದ್ದ ರೋಹಿತ್ ಜೋಫ್ರಾ ಆರ್ಚರ್ ಬೌಲಿಂಗ್ ನಲ್ಲಿ ಜಾಸ್ ಬಟ್ಲರ್ ಗೆ ವಿಕೆಟ್ ಒಪ್ಪಿಸಿದರು. ಬೆನ್ನಲ್ಲೇ 29 ರನ್ ಗಳಿಸಿ ಭರವಸೆ ಮೂಡಿಸಿದ್ದ ಶುಭ್ ಮನ್ ಗಿಲ್ ಕೂಡ ಜೋಫ್ರಾ ಆರ್ಚರ್ ಗೆ ವಿಕೆಟ್ ಒಪ್ಪಿಸಿದರು.

ನಿಧಾನಗತಿ ಬ್ಯಾಟಿಂಗ್ ಆರಂಭಿಸಿದ ಕೊಹ್ಲಿ 48 ಎಸೆತಗಳಲ್ಲಿ 11 ರನ್ ಗಳಿಸಿದರು. ಈ ಹಂತದಲ್ಲಿ ಬೌಲಿಂಗ್ ದಾಳಿಗಿಳಿದ ಡೋಮ್ ಬೆಸ್ಸ್.. ಕೊಹ್ಲಿ ವಿಕೆಟ್ ಉರುಳಿಸಿದರು. ಬೆನ್ನಲ್ಲೇ ಅಜಿಂಕ್ಯಾ ರಹಾನೆ ಕೂಡ ಡೋಮ್ ಬೆಸ್ ಬೌಲಿಂಗ್ ನಲ್ಲಿ 1 ರನ್ ಗಳಿಸಿ ಜೋ ರೂಟ್ ಗೆ ಕ್ಯಾಚ್ ನೀಡಿ ಔಟಾದರು.

ಟೀಂ ಇಂಡಿಯಾ ನಾಲ್ಕು ವಿಕೆಟ್ ಕಳೆದುಕೊಂಡು 73 ರನ್ ಗಳಿಸಿದೆ. 26 ರನ್ ಗಳಿಸಿರುವ ಚೇತೇಶ್ವರ ಪೂಜಾರ ಮತ್ತು ರಿಷಬ್ ಪಂತ್ ಕ್ರೀಸ್ ಕಾಯ್ದುಕೊಂಡಿದ್ದಾರೆ.