Saturday, 26th October 2024

AB de Villiers: ಕನ್ನಡದಲ್ಲೇ ಟ್ವೀಟ್‌ ಮಾಡಿ ಕನ್ನಡಿಗರ ಮನಗೆದ್ದ ಎಬಿಡಿ

ಜೊಹಾನ್ಸ್‌ಬರ್ಗ್‌: 2024 ಸಾಲಿನ ಪ್ರತಿಷ್ಠಿತ ಐಸಿಸಿ ಹಾಲ್‌ ಆಫ್‌ ಫೇಮ್‌(ICC Hall of Fame) ಪ್ರಶಸ್ತಿ ಸ್ವೀಕರಿಸಿದ ದಕ್ಷಿಣ ಆಫ್ರಿಕಾದ ಸವ್ಯಸಾಚಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್(AB de Villiers) ಕನ್ನಡದಲ್ಲೇ ಧನ್ಯವಾದ ಹೇಳುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ವಿಲಿಯರ್ಸ್‌ ಜತೆ ಇಂಗ್ಲೆಂಡ್‌ನ ಅಲಸ್ಟೇರ್‌ ಕುಕ್‌ ಮತ್ತು ಭಾರತ ಮಹಿಳಾ ತಂಡದ ಮಾಜಿ ಆಟಗಾರ್ತಿ ನೀತು ಡೇವಿಡ್ ಕೂಡ ಈ ಪ್ರಶಸ್ತಿಗೆ ಭಾಜನರಾಗಿದ್ದರು.

ಎಬಿ ಡಿವಿಲಿಯರ್ಸ್‌ ಈ ಪ್ರತಿಷ್ಠಿತ ಹಾಲ್ ಆಫ್ ಫೇಮ್ ಪ್ರಶಸ್ತಿ ಸ್ವೀಕರಿಸಿದ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಶುಭಹಾರೈಸಿತ್ತು. “ಗೌರವಗಳು ಬರುತ್ತವೇ, ಹೋಗುತ್ತವೆ. ಆದರೆ ಈ ಫ್ರೇಮ್ ಇದೆಯಲ್ಲ, ಇದು ಎಂದೆಂದಿಗೂ ಅಜರಾಮರ. ಎಬಿಡಿ ನೀವಿದಕ್ಕೆ ಅರ್ಹರಾದವರು” ಎಂದು ಎಬಿಡಿ ಫೋಟೋ ಜತೆಗೆ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿತ್ತು.

ಇದನ್ನೂ ಓದಿ IND vs NZ Test : ಕಿವೀಸ್‌ಗೆ ಮುನ್ನಡೆ; ಸರಣಿ ಕಳೆದುಕೊಳ್ಳುವ ಆತಂಕದಲ್ಲಿ ಭಾರತ

ಇದಕ್ಕೆ ಪ್ರತಿಯಾಗಿ ಟ್ವೀಟ್‌ ಮಾಡಿದ ಎಬಿ ಡಿವಿಲಿಯರ್ಸ್, ಕನ್ನಡದಲ್ಲಿಯೇ “ಧನ್ಯವಾದಗಳು” ಎಂದು ಕೈಮುಗಿದು ಹಾರ್ಟ್ ಎಮೋಜಿಯನ್ನು ಹಾಕಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇದು ಕನ್ನಡಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹಿಂದೊಮ್ಮೆ ಎಬಿಡಿ ಅವರು ಇಂಡಿಯಾ ಟುಡೇಗೆ ನೀಡಿದ ಸಂದರ್ಶನವೊಂದರಲ್ಲಿ “ನನ್ನ ಹೃದಯವು ಆರ್​ಸಿಬಿಯೊಂದಿಗೆ ಇದೆ. ಅಲ್ಲಿ ಅನೇಕ ವರ್ಷ ಆಡಿದ್ದೇನೆ. ಬೆಂಗಳೂರಿನ ಅಭಿಮಾನಿಗಳೊಂದಿಗೆ ನನಗೆ ಉತ್ತಮ ಸಂಪರ್ಕವಿದೆ. ಅವರು ಅಪಾರ ಪ್ರೀತಿ ತೋರುತ್ತಾರೆ” ಎಂದು ಹೇಳಿದ್ದರು.

ಎಬಿಡಿ ವಿಲಿಯರ್ಸ್‌(AB de Villiers ) ಅಂತಾರಾಷ್ಟ್ರೀಯ ಮಟ್ಟದಲ್ಲಿ 114 ಟೆಸ್ಟ್​, 228 ಏಕದಿನ ಹಾಗೂ 78 ಟಿ–20 ಪಂದ್ಯಗಳನ್ನು ಆಡಿ ವೃತ್ತಿ ಜೀವನದ ಶ್ರೇಷ್ಠ ಆಟಗಾರನೆಂಬ ಹೆಗ್ಗಳಿಕೆ ಹೊಂದಿದ್ದಾರೆ. ಟೆಸ್ಟ್‌ನಲ್ಲಿ 8,765 ರನ್‌, 222 ಕ್ಯಾಚ್‌ ಮತ್ತು 5 ಸ್ಟಂಪಿಂಗ್‌ ಮಾಡಿದ್ದಾರೆ. ಏಕದಿನದಲ್ಲಿ 9,577 ರನ್‌, 176 ಕ್ಯಾಚ್‌ ಪಡೆದಿದ್ದಾರೆ. ಟಿ20 ಯಲ್ಲಿ 1,672 ರನ್‌, 65 ಕ್ಯಾಚ್‌ ಹಿಡಿದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ ವಿಶ್ವ ದಾಖಲೆ  ವಿಲಿಯರ್ಸ್‌ ಹೆಸರಿನಲ್ಲಿದೆ. 2015 ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಕೇವಲ 31 ಎಸೆತದಲ್ಲಿ ಶತಕ ಬಾರಿಸಿದ್ದರು.