Saturday, 14th December 2024

ಎಎಫ್‌ಸಿ ಕಪ್ ಫುಟ್‌ಬಾಲ್: ಬಶುಂಧರಾ ಕಿಂಗ್ಸ್’ಗೆ ಬೆಂಗಳೂರು ಎಫ್‌ಸಿ ಸವಾಲು

ಮಾಲ್ಡಿವ್ಸ್ : ಬೆಂಗಳೂರು ಎಫ್‌ಸಿ ತಂಡವು ಎಎಫ್‌ಸಿ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಶನಿವಾರ ಬಾಂಗ್ಲಾ ದೇಶದ ಬಶುಂಧರಾ ಕಿಂಗ್ಸ್ ಸವಾಲಿಗೆ ಸಜ್ಜಾಗಿದೆ.

‘ಡಿ’ ಗುಂಪಿನ ಈ ಹಿಂದಿನ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್‌ ವಿರುದ್ಧ 0-2 ಅಂತರದಿಂದ ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್‌ಸಿ ಸೋಲು ಕಂಡಿತ್ತು.

ಗುಂಪು ಹಂತದ ಮೊದಲ ಹಣಾಹಣಿಯಲ್ಲಿ ಮಜಿಯಾ ಸ್ಪೋರ್ಟ್ಸ್ ಆಂಡ್‌ ರಿಕ್ರಿಯೇಷನ್ಸ್ ಕ್ಲಬ್ ತಂಡದ ಎದುರು 2-0ಯಿಂದ ಜಯ ಸಾಧಿಸಿರುವ ಬಶುಂಧರಾ ಕಿಂಗ್ಸ್ ಕೂಡ ಆತ್ಮವಿಶ್ವಾಸದಲ್ಲಿದೆ. ಕಳೆದ ಆವೃತ್ತಿಯ ಎಎಫ್‌ಸಿ ಟೂರ್ನಿಯಲ್ಲಿ ಬಶುಂಧರಾ ಕಿಂಗ್ಸ್ ಪದಾರ್ಪಣೆ ಮಾಡಿತ್ತು. 2020-21ರ ಸಾಲಿನ ಬಾಂಗ್ಲಾದೇಶ ಫೆಡರೇಷನ್ ಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಬಶುಂಧರಾ ಕಿಂಗ್ಸ್ ಬೆಂಗಳೂರು ಎಫ್‌ಸಿ ತಂಡಕ್ಕೆ ಇದೇ ಮೊದಲ ಬಾರಿ ಮುಖಾಮುಖಿಯಾಗಲಿದೆ.

ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿಗೆ ಸೋಲುಣಿಸಿರುವ ಎಟಿಕೆ ಮೋಹನ್ ಬಾಗನ್ ತಂಡವು ಅದೇ ಲಯವನ್ನು ಮುಂದುವರಿಸುವ ಹಂಬಲದಲ್ಲಿದೆ. ಶನಿವಾರ ನಡೆಯುವ ಹಣಾಹಣಿಯಲ್ಲಿ ರಾಯ್‌ ಕೃಷ್ಣ ನಾಯಕತ್ವದ ತಂಡವು ಮಜಿಯಾ ಸ್ಪೋರ್ಟ್ಸ್ ಆಯಂಡ್‌ ರಿಕ್ರಿಯೇಷನ್ಸ್ ಕ್ಲಬ್ ಎದುರು ಸೆಣಸಲಿದೆ.

ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಎಟಿಕೆಎಂಬಿ ತಂಡಕ್ಕೆ ನಾಕೌಟ್ ಹಾದಿ ಸುಲಭವಾಗಲಿದೆ.