ಗ್ರೇಟರ್ ನೋಯ್ಡಾ: ಅಫಘಾನಿಸ್ತಾನ(Afghanistan) ಹಾಗೂ ನ್ಯೂಜಿಲ್ಯಾಂಡ್(AFG vs NZ) ನಡುವಿನ ಏಕೈಕ ಟೆಸ್ಟ್ ಪಂದ್ಯದ ಮೂರನೇ ದಿನವೂ ಒಂದು ಎಸೆತ ಕಾಣದೆ ರದ್ದುಗೊಂಡಿದೆ. ಬುಧವಾರ ಬೆಳಗ್ಗೆ ಸುರಿದ ಭಾರೀ ಮಳೆಯಿಂದ ಮೂರನೇ ದಿನದಾಟ ಕೂಡ ರದ್ದುಗೊಂಡಿತು.
ಗ್ರೇಟರ್ ನೋಯ್ಡಾದ(Greater Noida) ಶಹೀದ್ ವಿಜಯ್ ಸಿಂಗ್ ಪಥಿಕ್ ಕ್ರೀಡಾ ಸಂಕೀರ್ಣದ (Shaheed Vijay Singh Pathik Sports Complex) ಹೊರ ಮೈದಾನ ಒದ್ದೆಯಾಗಿದ್ದರಿಂದ ಎರಡನೇ ದಿನದವಾದ ಮಂಗಳವಾರ ಕೂಡ ಆಟವೂ ರದ್ದಾಗಿತ್ತು. ಸೋಮವಾರ ಸುರಿದ ಭಾರಿ ಮಳೆಯಿಂದಾಗಿ ಪಂದ್ಯದ ಮೊದಲ ದಿನದ ಆಟವೂ ರದ್ದುಗೊಳಿಸಲಾಗಿತ್ತು. ಮಂಗಳವಾರ ಮಳೆ ಬಿಡುವು ನೀಡಿತ್ತಾದರೂ ಮಳೆಯಿಂದ ತೇವಗೊಂಡಿದ್ದ ಅಂಗಣವನ್ನು ಒಣಗಿಸಲು ಸಾಧ್ಯವಾಗದ ಕಾರಣ 2ನೇ ದಿನದಾಟ ಕೂಡ ರದ್ದುಗೊಂಡಿತ್ತು.
ಮಳೆಯಿಂದ ತೇವಗೊಂಡಿದ್ದ ಅಂಗಣವನ್ನು ಒಣಗಿಸಲು ಎರಡನೇ ದಿನ ಟಾರ್ಪಲಿನ್ ಹಾಗೂ ಎಲೆಕ್ಟ್ರಿಕ್ ಟೇಬಲ್ ಫ್ಯಾನ್ಗಳನ್ನು ಬಳಸಲಾಗಿತ್ತು. ಇದರ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಜತೆಗೆ ಟೀಕೆ, ಟ್ರೋಲ್‌ಗೆ ಗುರಿಯಾಗಿತ್ತು. ಸರಿಯಾದ ಡ್ರೈನೇಜ್ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿ Vinesh Phogat: ಪಿ.ಟಿ. ಉಷಾ ವಿರುದ್ಧ ಗಂಭೀರ ಆರೋಪ ಮಾಡಿದ ವಿನೇಶ್
ಸ್ಟೇಡಿಯಂನ ಕಳಪೆ ನಿರ್ವಹಣೆಯ ಕಾರಣದಿಂದ ಆಫ್ಘಾನ್ ಕ್ರಿಕೆಟ್ ಮಂಡಳಿ ಅಸಮಾಧಾನಗೊಂಡಿದ್ದು, ‘ಇದೊಂದು ದೊಡ್ಡ ಅವ್ಯವಸ್ಥೆ, ನಾವು ಇಲ್ಲಿಗೆ ಮತ್ತೆ ಬರುವುದಿಲ್ಲʼ ಎಂದು ಎಸಿಬಿ ಅಧಿಕಾರಿಯೊಬ್ಬರು ಅಸಮಾಧಾನ ಹೊರಹಾಕಿದ್ದಾರೆ ಎಂದು ವರದಿಯಾಗಿದೆ.
ಬಿಸಿಸಿಐ ಟೆಸ್ಟ್ ಆಯೋಜನೆಗೆ ಕಾನ್ಪುರ, ಬೆಂಗಳೂರು ಮತ್ತು ನೋಯ್ಡಾವನ್ನು ಆಯ್ಕೆಯಾಗಿ ನೀಡಿತ್ತು. ಆದರೆ, ಲಾಜಿಸ್ಟಿಕ್ ಕಾರಣದಿಂದ ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ ನೋಯ್ಡಾವನ್ನು ಆಯ್ಕೆ ಮಾಡಿತ್ತು. 2016 ರಿಂದ ಇದುವರೆಗೆ 11 ಸೀಮಿತ ಓವರ್‌ಗಳ ಪಂದ್ಯಕ್ಕೆ ಇದೇ ಮೈದಾನವನ್ನು ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ ತನ್ನ ತವರು ಮೈದಾನವಾಗಿ ಬಳಸಿಕೊಂಡಿತ್ತು. ಈ ಬಾರಿ ಮಳೆಯಿಂದಾಗಿ ಅಡಚಣೆ ಉಂಟಾಯಿತು. ಸದ್ಯದ ಪರಿಸ್ಥಿತಿ ನೋಡುವಾಗ ನಾಲ್ಕನೇ ದಿನವೂ ಪಂದ್ಯ ನಡೆಯುವುದು ಅನುಮಾನ ಎನ್ನುವಂತಿದೆ. ಹೀಗಾಗಿ ನಾಳೆ(ಗುರುವಾರ) ಪಂದ್ಯವನ್ನು ಸಂಪೂರ್ಣವಾಗಿ ರದ್ದು ಎಂದು ಘೋಷಿಸುವ ಸಾಧ್ಯತೆ ಇದೆ. ಭಾರೀ ನಿರೀಕ್ಷೆಯಲ್ಲಿ ಟೆಸ್ಟ್ ಆಡಲು ಎದುರು ನೋಡುತ್ತಿದ್ದ ಆಫ್ಘಾನ್‌ಗೆ ನಿರಾಸೆಯಾಗಿರುವುದಂತು ನಿಜ.
ಪಂದ್ಯ ರದ್ದುಗೊಂಡರೆ ನ್ಯೂಜಿಲ್ಯಾಂಡ್ ತಂಡ ಲಂಕಾ ವಿರುದ್ಧದ 2 ಟೆಸ್ಟ್ ಪಂದ್ಯಗಳ ಸರಣಿಯನ್ನಾಡಲು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಸೆಪ್ಟೆಂಬರ್ 18ರಿಂದ ಆರಂಭಗೊಳ್ಳಲಿದೆ.