Thursday, 19th September 2024

Ajay Ratra : ಬಿಸಿಸಿಐ ಕ್ರಿಕೆಟಿಗರ ಆಯ್ಕೆ ಸಮಿತಿ ಸದಸ್ಯರಾಗಿ ಅಜಯ್‌ ರಾತ್ರಾ ನೇಮಕ

Team India's Selection Panel

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ವಿಕೆಟ್ ಕೀಪರ್ ಅಜಯ್ ರಾತ್ರಾ (Ajay Ratra) ಅವರನ್ನು ಹಿರಿಯ ಪುರುಷರ ಕ್ರಿಕೆಟ್ ತಂಡದ ಆಯ್ಕೆಗಾರರಾಗಿ ಬಿಸಿಸಿಐ ಮಂಗಳವಾರ ನೇಮಿಸಿದೆ. ಸಂಪ್ರದಾಯದ ಪ್ರಕಾರ ಎಲ್ಲಾ ಐದು ಆಯ್ಕೆದಾರರು ವಿಭಿನ್ನ ವಲಯಗಳನ್ನು ಪ್ರತಿನಿಧಿಸುತ್ತಾರೆ ಮತ್ತು ರಾತ್ರಾ ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯಲ್ಲಿ ಉತ್ತರ ವಲಯವನ್ನು ಪ್ರತಿನಿಧಿಸಲಿದ್ದಾರೆ. ಕಳೆದ ವರ್ಷ ಅಗರ್ಕರ್ ಅವರನ್ನು ಮುಖ್ಯ ಆಯ್ಕೆಗಾರರಾಗಿ ನೇಮಿಸಿದ ನಂತರ ಆಯ್ಕೆ ಸಮಿತಿಯು ಪಶ್ಚಿಮ ವಲಯದಿಂದ ಇಬ್ಬರು ಆಯ್ಕೆದಾರರನ್ನು ಹೊಂದಿತ್ತು. ಸಲಿಲ್‌ ಅಂಕೋಲಾ ಅವರ ಬದಲಿಗೆ ಇದೀಗ ಅಜಯ್‌ ರಾತ್ರಾ ಅವರು ಆಯ್ಕೆಗೊಂಡಿದ್ದಾರೆ.

“ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕ್ರಿಕೆಟ್ ಸಲಹಾ ಸಮಿತಿಯು ಮಂಗಳವಾರ ಅಜಿತ್ ಅಗರ್ಕರ್ ನೇತೃತ್ವದ ಪುರುಷರ ಆಯ್ಕೆ ಸಮಿತಿಯ ಹೊಸ ಸದಸ್ಯರಾಗಿ ಅಜಯ್ ರಾತ್ರಾ ಅವರನ್ನು ಹೆಸರಿಸಿದೆ. ಸಲೀಲ್ ಅಂಕೋಲಾ ಬದಲಿಗೆ ರಾತ್ರಾ ಅವರನ್ನು ಸಮಿತಿಯಲ್ಲಿ ಸೇರಿಸಿಕೊಳ್ಳಲಾಗುವುದು, “ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್ ಸರಣಿಗೆ ಮುಂಚಿತವಾಗಿ ಈ ನೇಮಕ ಸಂಭವಿಸಿದೆ. ಆದಾಗ್ಯೂ, ದುಲೀಪ್ ಟ್ರೋಫಿ ಪ್ರಾರಂಭವಾಗುವ ಗುರುವಾರದಿಂದ ರಾತ್ರಾ ತಮ್ಮ ಹೊಸ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. “ಇದು ದೊಡ್ಡ ಗೌರವ ಮತ್ತು ಸವಾಲು. ಭಾರತೀಯ ಕ್ರಿಕೆಟ್‌ಗೆ ಕೊಡುಗೆ ನೀಡಲು ನಾನು ಎದುರು ನೋಡುತ್ತಿದ್ದೇನೆ,” ಎಂದು ರಾತ್ರಾ ಪಿಟಿಐಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Pro Kabaddi 2024 : ಅಕ್ಟೋಬರ್‌ 18ರಿಂದ ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿ ಆರಂಭ

ರಾತ್ರಾ ಅವರು ಆಯ್ಕೆ ಸಮಿತಿಯ ಅಸ್ತಿತ್ವದಲ್ಲಿರುವ ಸದಸ್ಯರೊಂದಿಗೆ ಕೆಲಸ ಮಾಡುತ್ತಾರೆ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಮುಂದಿನ ಪೀಳಿಗೆಯ ಕ್ರಿಕೆಟಿಗರನ್ನು ಗುರುತಿಸಲು ಮತ್ತು ಬೆಂಬಲಿಸಲು ಕೆಲಸ ಮಾಡುತ್ತಾರೆ. ರಾತ್ರಾ ಅವರು ಅಸ್ಸಾಂ, ಪಂಜಾಬ್ ಮತ್ತು ಉತ್ತರ ಪ್ರದೇಶದ ಮುಖ್ಯ ತರಬೇತುದಾರರಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. 2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ಅವರು ಭಾರತ ತಂಡದ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದರು, “ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

“ಅವರ ಕ್ರಿಕೆಟ್‌ ಒಳನೋಟಗಳು ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಿ, ಪೋಷಿಸಿ ಉನ್ನತ ಮಟ್ಟದಲ್ಲಿ ಉತ್ಕೃಷ್ಟತೆ ಸಾಧಿಸಲು ಅವಕಾಶವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಲು ಸಮಿತಿಗೆ ಸಾಧನವಾಗುತ್ತವೆ.” ಎಂದು ಬಿಸಿಸಿಐ ಹೇಳಿದೆ.