Tuesday, 7th January 2025

ICC Champions Trophy: ಜನವರಿ 12ಕ್ಕೆ ಚಾಂಪಿಯನ್ಸ್‌ ಟ್ರೋಫಿಗೆ ಭಾರತ ತಂಡ ಪ್ರಕಟ!

Ajit Agarkar to reveal India's ICC Champions Trophy squad by January 12; Hardik, KL Rahul to be ignored for vice-captaincy

ನವದೆಹಲಿ: ಆಸ್ಟ್ರೇಲಿಯಾ ಎದುರು ಐದು ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯನ್ನು 1-3 ಅಂತರದಲ್ಲಿ ಸೋತಿರುವ ಭಾರತ ತಂಡ, ಇನ್ನು ಮುಂದೆ 50 ಓವರ್‌ಗಳ ಸ್ವರೂಪದ ಕ್ರಿಕೆಟ್‌ ಕಡೆಗೆ ಗಮನ ಹರಿಸಲಿದೆ. ಫೆಬ್ರವರಿ 19 ರಂದು ಪಾಕಿಸ್ತಾನದ ಆತಿಥ್ಯದಲ್ಲಿ ಆರಂಭವಾಗುವ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (ICC Champions Trophy) ಟೂರ್ನಿಗೆ ಟೀಮ್‌ ಇಂಡಿಯಾ ಸಿದ್ದವಾಗಲಿದೆ. ಈ ಹಿನ್ನೆಲೆಯಲ್ಲಿ ಜನವರಿ 12 ರಂದು ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು ಭಾರತ ತಂಡವನ್ನು ಪ್ರಕಟಿಸಲಿದೆ ಎಂದು ವರದಿಯಾಗಿದೆ.

ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಟೀಮ್‌ ಇಂಡಿಯಾ, ಇಂಗ್ಲೆಂಡ್‌ ಎದುರು ಟಿ20ಐ ಹಾಗೂ ಏಕದಿನ ಸರಣಿಗಳನ್ನು ಆಡಲಿದೆ. ಜನವರಿ 22 ರಂದು ಇಂಗ್ಲೆಂಡ್‌ ವಿರುದ್ಧದ ವೈಟ್‌ಬಾಲ್‌ ಸರಣಿ ಆರಂಭವಾಗಲಿದೆ. 5 ಪಂದ್ಯಗಳ ಟಿ20ಐ ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಆಡಲಿವೆ.

IND vs AUS: ʻಜಸ್‌ಪ್ರೀತ್‌ ಬುಮ್ರಾ ಆಡಿಲ್ಲವಾಗಿದ್ರೆ ಭಾರತ 0-5 ಅಂತರದಲ್ಲಿ ಸೋಲುತಿತ್ತುʼ-ಹರ್ಭಜನ್‌ ಸಿಂಗ್‌!

ಜನವರಿ 12ಕ್ಕೆ ಭಾರತ ತಂಡ ಪ್ರಕಟ

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ 15 ಸದಸ್ಯರ ತಾತ್ಕಾಲಿಕ ತಂಡವನ್ನು ಪ್ರಕಟಿಸಲು ಎಲ್ಲಾ ತಂಡಗಳಿಗೂ ಜನವರಿ 12 ಕೊನೆಯ ದಿನಾಂಕವಾಗಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಆಯ್ಕೆ ಸಮಿತಿಯು 12ಕ್ಕೆ ತಂಡವನ್ನು ಪ್ರಕಟಿಸಲಿದೆ. ಆದರೆ, ಫೆಬ್ರವರಿ 13ರವರೆಗೂ ತನ್ನ ತಂಡದಲ್ಲಿನ ಆಟಗಾರರ ಬದಲಾವಣೆಗೆ ಅವಕಾಶವನ್ನು ನೀಡಲಾಗಿದೆ.

“ಎಲ್ಲಾ ತಂಡಗಳು ಕೂಡ ತನ್ನ ತಾತ್ಕಾಲಿಕ 15 ಸದಸ್ಯರ ಪಟ್ಟಿಯನ್ನು ಐಸಿಸಿಗೆ ಜನವರಿ 12ರ ಒಳಗೆ ಸಲ್ಲಿಸಬೇಕಾಗಿದೆ ಹಾಗೂ ಫೆಬ್ರವರಿ 13ರ ವರೆಗೂ ಬದಲಾವಣೆಗೆ ಅವಕಾಶವನ್ನು ನೀಡಲಾಗಿದೆ. ಫೆಬ್ರವರಿ 13 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತನಗೆ ಸಲ್ಲಿಸಿದ ತಂಡಗಳನ್ನು ಬಿಡುಗಡೆ ಮಾಡಲಿದೆ. ಅಲ್ಲಿಯವರೆಗೂ ತಮ್ಮ ತಂಡಗಳಲ್ಲಿ ಬದಲಾವಣೆ ಮಾಡಬೇಕೆ ಅಥವಾ ಬೇಡವೇ ಎಂಬುದು ಆಯಾ ಕ್ರಿಕೆಟ್‌ ಬೋರ್ಡ್‌ಗಳಿಗೆ ಬಿಟ್ಟದ್ದು,” ಎಂದು ಐಸಿಸಿ ಅಧಿಕಾರಿಯೊಬ್ಬರು ಟೈಮ್‌ ಆಫ್‌ ಇಂಡಿಯಾಗೆ ತಿಳಿಸಿದ್ದಾರೆ.

ಭಾರತ ಏಕದಿನ ತಂಡಕ್ಕೆ ಜಸ್‌ಪ್ರೀತ್‌ ಬುಮ್ರಾ ಉಪನಾಯಕ

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಭಾರತ ತಂಡಕ್ಕೆ ಉಪನಾಯಕನನ್ನಾಗಿ ಜಸ್‌ಪ್ರೀತ್‌ ಬುಮ್ರಾ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ವರದಿಯಾಗಿದೆ. ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಜಸ್‌ಪ್ರೀತ್‌ ಬುಮ್ರಾ ಅವರು ಸದ್ಯ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಬಿಸಿಸಿಐ ಸೆಲೆಕ್ಟರ್‌ಗಳು ಹಾರ್ದಿಕ್‌ ಪಾಂಡ್ಯ ಹಾಗೂ ಕೆಎಲ್‌ ರಾಹುಲ್‌ ಅವರ ಬದಲು ಬುಮ್ರಾಗೆ ಉಪ ನಾಯಕನ ಸ್ಥಾನ ನೀಡುವ ಇಂಗಿತವನ್ನು ಹೊಂದಿದ್ದಾರೆ. 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡಕ್ಕೆ ಹಾರ್ದಿಕ್‌ ಪಾಂಡ್ಯ ಉಪ ನಾಯಕರಾಗಿದ್ದರು. ಆದರೆ, ಅವರು ಗಾಯಕ್ಕೆ ತುತ್ತಾಗಿದ್ದ ಬಳಿಕ ಅವರ ಸ್ಥಾನವನ್ನು ಕೆಎಲ್‌ ರಾಹುಲ್‌ ತುಂಬಿದ್ದರು.

ಈ ಸುದ್ದಿಯನ್ನು ಓದಿ: Jasprit Bumrah: ಇಂಗ್ಲೆಂಡ್‌ ವಿರುದ್ಧದ ಸರಣಿ; ಬುಮ್ರಾಗೆ ವಿಶ್ರಾಂತಿ?

Leave a Reply

Your email address will not be published. Required fields are marked *