ಮೆಲ್ಬರ್ನ್: ತಂಡದ ಸತತ ಸೋಲು ಹಾಗೂ ಬ್ಯಾಟಿಂಗ್‌ನಲ್ಲಿ ತೀವ್ರ ವೈಫಲ್ಯ ಎದುರಿಸುತ್ತಿರುವ ಭಾರತದ ನಾಯಕ ರೋಹಿತ್ ಶರ್ಮಾರ(Rohit Sharma) ಟೆಸ್ಟ್ ಕ್ರಿಕೆಟ್ ಭವಿಷ್ಯ ಆಸ್ಟ್ರೇಲಿಯಾ ಸರಣಿಯಲ್ಲೇ ನಿರ್ಧಾರಗೊಳ್ಳುವ ಸಾಧ್ಯತೆಯಿದೆಯೊಂದು ಕಂಡು ಬಂದಿದೆ. ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್(Ajit Agarkar) ಮೆಲ್ಬರ್ನ್‌ನಲ್ಲಿ(Melbourne) ಕಾಣಿಸಿಕೊಂಡಿದ್ದಾರೆ. ಹೀಗಾಗಿ ನೆಟ್ಟಿಗರು ರೋಹಿತ್ ಟೆಸ್ಟ್ ಭವಿಷ್ಯ ಕೊನೆಗೊಳ್ಳುವುದು ಖಚಿತ ಎನ್ನಲಾರಂಭಿಸಿದ್ದಾರೆ.
ಈಗಾಗಲೇ ಟೀಮ್ ಇಂಡಿಯಾದ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವಂತೆ ಒತ್ತಾಯಿಸಿ ಅಭಿಯಾನ ಆರಂಭಿಸಿದ್ದಾರೆ. ಇದರ ಬೆನ್ನಲೇ ಅಜಿತ್ ಅಗರ್ಕರ್ ಅವರು ರೋಹಿತ್ ಜತೆ ಆಸ್ಟ್ರೇಲಿಯಾದಲ್ಲಿ ಮಾತುಕತೆ ನಡೆಸಿದ ಫೋಟೊಗಳು ವೈರಲ್ ಆಗಿದೆ. ವರದಿಯ ಪ್ರಕಾರ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ರೋಹಿತ್ ಭವಿಷ್ಯದ ಕುರಿತು ಮಾತುಕತೆ ನಡೆಸಲೆಂದೇ ಮೆಲ್ಬರ್ನ್‌ಗೆ ಆಗಮಿಸಿದ್ದು ಎನ್ನಲಾಗಿದೆ.
ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ರೋಹಿತ್ ಬ್ಯಾಟಿಂಗ್ ಮರೆತವರಂತೆ ಆಡಿ ಕೇವಲ 3 ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಇದಕ್ಕೂ ಮುನ್ನ ನಡೆದಿದ್ದ 2 ಮತ್ತು ಮೂರನೇ ಪಂದ್ಯದಲ್ಲಿ ಮಧ್ಯಮ ಕ್ರಮಾಂದಲ್ಲಿ ಆಡಿದ್ದ ರೋಹಿತ್ ಅಲ್ಲಿಯೂ ವೈಫಲ್ಯ ಕಂಡಿದ್ದರು. ಒಂದಂಕಿಗೆ ಸೀಮಿತರಾಗಿದ್ದರು. ರೋಹಿತ್ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಆಟಗಾರರಾದ ಮಾರ್ಕ್ ವಾ ಮತ್ತು ಕೆರ್ರಿ ಓಕೀಫ್ ಆತಂಕ ವ್ಯಕ್ತಪಡಿಸಿದ್ದು, ಉಳಿದ ಮೂರು ಇನ್ನಿಂಗ್ಸ್‌ಗಳಲ್ಲಿ ರೋಹಿತ್ ದೊಡ್ಡ ಮೊತ್ತ ಬಾರಿಸಿದಿದ್ದರೆ ಅವರ ವೃತ್ತಿಜೀವನವು ಖಂಡಿತವಾಗಿಯೂ ಅಂತ್ಯಗೊಳ್ಳಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ Vijay Hazare Trophy: ವಿಜಯ್ ಹಜಾರೆಯಲ್ಲಿ ಅಜೇಯ ಓಟ ಮುಂದುವರಿಸಿದ ಕರ್ನಾಟಕ
ಕೊಹ್ಲಿಯ ಭವಿಷ್ಯವೂ ನಿರ್ಧಾರ?
ರೋಹಿತ್ ಮಾತ್ರವಲ್ಲದೆ ವಿರಾಟ್ ಕೊಹ್ಲಿ ಕೂಡ ಟೆಸ್ಟ್‌ನಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಕಾಣುತ್ತಿದ್ದಾರೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ತಲುಪಲು ಭಾರತ ವಿಫಲವಾದರೆ ರೋಹಿತ್ ಮತ್ತು ವಿರಾಟ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಬಹುದು ಎಂಬ ಮಾತುಗಳು ಕೇಳಿ ಬಂದಿದೆ. ಈಗಾಗಲೇ ಉಭಯ ಆಟಗಾರರು ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.