ವಿಶಾಖಪಟ್ಟಣಂ: ಮೆಲ್ಬರ್ನ್ ಮೈದಾನದಲ್ಲಿ ಚೊಚ್ಚಲ ಶತಕ ಬಾರಿಸಿ ಮೆರೆದಾಡಿ, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಇಂದು(ಶನಿವಾರ) ಸೂಪರ್ ಸ್ಟಾರ್ ಆದ 21 ವರ್ಷದ ನಿತೀಶ್ ಕುಮಾರ್ ರೆಡ್ಡಿಗೆ(Nitish Kumar Reddy) ಇದೀಗ ನಗದು ಬಹುಮಾನವೊಂದು ಘೋಷಣೆಯಾಗಿದೆ. ಆಂಧ್ರ ಕ್ರಿಕೆಟ್ ಸಂಸ್ಥೆ (ಎಸಿಎ) 25 ಲಕ್ಷ ರೂ ನಗದು ಪ್ರೋತ್ಸಾಹಧನ ನೀಡುವುದಾಗಿ ತಿಳಿಸಿದೆ.
ಎಸಿಎ ಅಧ್ಯಕ್ಷ ಹಾಗೂ ವಿಜಯವಾಡ ಸಂಸದ ಕೇಶಿನೇನಿ ಶಿವನಾಥ್ ಅವರು ನಗದು ಪ್ರೋತ್ಸಾಹಧನ ಘೋಷಿಸಿದ್ದು ಈ ಪುರಸ್ಕಾರವನ್ನು ಶೀಘ್ರದಲ್ಲೇ ಸಿಎಂ ಚಂದ್ರಬಾಬು ನಾಯ್ಡು ಅವರ ಕೈಯಿಂದ ಕ್ರಿಕೆಟಿಗನಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ ಮೂರು ಟೆಸ್ಟ್‌ಗಳಲ್ಲಿ ಕ್ರಮವಾಗಿ 41, 38*, 42, 42 ಮತ್ತು 16 ರನ್‌ಗಳಿಸಿದ್ದ ನಿತೀಶ್ ಕುಮಾರ್ ರೆಡ್ಡಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಶಪಥ ಮಾಡಿ ಬಂದಂತೆ ಶತಕ ಬಾರಿಸಿ ತಂಡವನ್ನು ಫಾಲೋಆನ್ ಭೀತಿಯಿಂದ ಪಾರು ಮಾಡಿದರು. 81 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಖುಷಿಯಲ್ಲಿ ಪುಷ್ಪಾ ಸಿನಿಮಾದಲ್ಲಿ ಅಲ್ಲು ಅರ್ಜುನ್ ಟ್ರೇಡ್ ಮಾರ್ಕ್ ಶೈಲಿಯಲ್ಲಿ ಸಂಭ್ರಮಾಚರಣೆ ಮಾಡಿ ಗಮನ ಸೆಳೆದರು.
221ರನ್‌ಗೆ 7 ವಿಕೆಟ್ ಬಿದ್ದ ಈ ಹಂತದಲ್ಲಿ ಎಂಟನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದಿದ್ದ ನಿತೀಶ್ ಕುಮಾರ್ ಅವರು ವಾಷಿಂಗ್ಟನ್ ಅವರೊಂದಿಗೆ 127 ರನ್‌ಗಳ ಅಮೂಲ್ಯ ಜತೆಯಾಟದಲ್ಲಿ ಭಾಗಿಯಾದರು. ಇದೇ ವೇಳೆ ಆಸ್ಟ್ರೇಲಿಯಾದಲ್ಲಿ 8 ವಿಕೆಟ್‌ಗೆ ಅತ್ಯಧಿಕ ಜತೆಯಾಟ ನಡೆಸಿದ 2ನೇ ಜೋಡಿ ಎನಿಸಿಕೊಂಡರು. ದಾಖಲೆ ಸಚಿನ್ ತೆಂಡೂಲ್ಕರ್ ಮತ್ತು ಹರ್ಭಜನ್ ಸಿಂಗ್ ಹೆಸರಿನಲ್ಲಿದೆ. ಈ ಜೋಡಿ 2008ರಲ್ಲಿ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ 8ನೇ ವಿಕೆಟ್‌ಗೆ 129 ರನ್ ಒಟ್ಟುಗೂಡಿಸಿದ್ದರು. ಸುಂದರ್-ನಿತೀಶ್ ಜೋಡಿ 127 ರನ್ ಜತೆಯಾಟ ನಡೆಸಿದ ವೇಳೆ 2008ರಲ್ಲಿ ಅಡಿಲೇಡ್ ಮೈದಾನದಲ್ಲಿ ಅನಿಲ್ ಕುಂಬ್ಳೆ-ಹರ್ಭಜನ್ ಸಿಂಗ್ ಬಾರಿಸಿದ್ದ 107 ರನ್‌ಗಳ ಜತೆಯಾಟದ ದಾಖಲೆ ಪತನಗೊಂಡಿತು.
ನಿತೀಶ್ 99 ರನ್ ಗಳಿಸಿದ್ದ ವೇಳೆ ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ವಾಷಿಂಗ್ಟನ್ ಸುಂದರ್ ವಿಕೆಟ್ ಪತನಗೊಂಡಿತು. ಆ ಬಳಿಕ ಬಂದ ಜಸ್ಪ್ರೀತ್ ಬುಮ್ರಾ ಕೂಡ ವಿಕೆಟ್ ಕಳೆದುಕೊಂಡರು. ಈ ವೇಳೆ ನಿತೀಶ್ ನಾನ್ ಸ್ಟ್ರೈಕ್‌ನಲ್ಲಿದ್ದರು. ಕೊನೆಯ ವಿಕೆಟ್‌ಗೆ ಬ್ಯಾಟಿಂಗ್‌ಗೆ ಬಂದ ಮೊಹಮ್ಮದ್ ಸಿರಾಜ್ ಅವರು ನಿಂತು ಆಡಬಹುದೇ ಎಂಬ ಆತಂಕ ಭಾರತೀಯ ಕ್ರಿಕೆಟ್ ಅಭಿಮಾನಿಗಳದ್ದಾಗಿತ್ತು. ಸಿರಾಜ್ ಯಾವುದೇ ಆತಂಕಕ್ಕೆ ಒಳಗಾಗದೆ ಕಮಿನ್ಸ್ ಎಸೆತಗಳಿಗೆ ತೆಡೆಯೊಡ್ಡಿ ವಿಕೆಟ್ ಉಳಿಸಿಕೊಂಡು ಸಹ ಆಟಗಾರ ಶತಕ ಬಾರಿಸುವಲ್ಲಿ ನೆರವಾದರು.