ಮೆಲ್ಬರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರಿ ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ(Virat Kohli) ಅನಗತ್ಯವಾಗಿ ಸುದ್ದಿಯಾಗುತ್ತಿದ್ದಾರೆ. ಗುರುವಾರ ಮೊದಲ ದಿನದಾಟದಲ್ಲಿ ಆಸೀಸ್ ಬ್ಯಾಟರ್ ಸ್ಯಾಮ್ ಕೋನ್‌ಸ್ಟಾಸ್ ಜತೆ ಅನಗತ್ಯವಾಗಿ ಕಿರಿಕ್ ಮಾಡಿಕೊಂಡು ದಂಡದ ಶಿಕ್ಷೆಗೆ ಗುರಿಯಾಗಿದ್ದ ಕೊಹ್ಲಿ, ಈ ತಪ್ಪಿನಿಂದ ಇನ್ನೂ ಬುದ್ದಿ ಕಲಿತಂತೆ ಕಾಣುತ್ತಿಲ್ಲ. ಶುಕ್ರವಾರದ ದ್ವಿತೀಯ ದಿನದಾಟದಲ್ಲಿ ಪ್ರೇಕ್ಷಕರ ಜತೆ ವಾಗ್ವಾದ ನಡೆಸಿ ಮತ್ತೆ ಛೀಮಾರಿ ಹಾಕಿಸಿಕೊಂಡಿದ್ದಾರೆ.
ಔಟ್ ಆಗಿ ಪೆವಿಲಿಯನ್ ಕಡೆಗೆ ಹೋಗುತ್ತಿದ್ದ ವೇಳೆ ಆಸೀಸ್ ಪ್ರೇಕ್ಷಕರು ಚೀರಾಡುತ್ತಿದ್ದರು. ಇದರಿಂದ ತಾಳ್ಮೆ ಕಳೆದುಕೊಂಡ ಕೊಹ್ಲಿ ವಾಪಸ್ ಮೈದಾನದತ್ತ ಬಂದು ಪ್ರೇಕ್ಷಕರ ಜತೆ ವಾಗ್ವಾದಕ್ಕಿಳಿದರು. ಈ ವೇಳೆ ಬೌಂಡರಿ ಲೈನ್ ಬಳಿ ಇದ್ದ ಕೆಲ ಭದ್ರತಾ ಅಧಿಕಾರಿಗಳು ಕೊಹ್ಲಿಯನ್ನು ತಡೆದು ಸಮಾಧಾನಿಸಿ ಡ್ರೆಸ್ಸಿಂಗ್ ರೂಮ್‌ನತ್ತ ಕಳುಹಿಸಿಕೊಟ್ಟರು. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಇದನ್ನೂ ಓದಿ AUS vs IND: ‘ನಿಮ್ಮಿಂದ ಇದು ಎಂದೂ ನಿರೀಕ್ಷಿಸಿರಲಿಲ್ಲ’; ಕೊಹ್ಲಿ ವರ್ತನೆಗೆ ಗವಾಸ್ಕರ್ ಬೇಸರ
ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಕೊಹ್ಲಿ 86 ಎಸೆತ ಎದುರಿಸಿ ನಿಂತರೂ ಅವರಿಂದ ಗಳಿಸಲಾಗಿದ್ದು ಕೇವಲ 36 ರನ್ ಮಾತ್ರ. ಬಾರಿಸಿದ್ದು 4 ಬೌಂಡರಿ. ಉತ್ತಮವಾಗಿ ಆಡುತ್ತಿದ್ದ ಜೈಸ್ವಾಲ್ ಅವರನ್ನು ರನೌಟ್ ಮಾಡಿದ ಅಪಕೀರ್ತಿ ಕೂಡ ಕೊಹ್ಲಿ ವಿರುದ್ಧ ಕೇಳಿಬಂದಿದೆ. ಆಸ್ಟ್ರೇಲಿಯಾದ 474 ರನ್ ಹಿಬಾಲಿಸುತ್ತಿರುವ ಭಾರತ, ದ್ವಿತೀಯ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗೆ 164 ರನ್ ಗಳಿಸಿದ್ದು ಇನ್ನೂ 310 ರನ್ ಹಿನ್ನಡೆಯಲ್ಲಿದೆ.
ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಕೊಹ್ಲಿಯನ್ನು ಕಿಂಗ್ ಎಂದು ವರ್ಣಿಸಿದ್ದ ಆಸೀಸ್ ಮಾಧ್ಯಮಗಳು ಿದೀಗ ಕೊಹ್ಲಿಯ ಅನಗತ್ಯ ಉದ್ಧಟತನ ಕಂಡು ಅವಮಾನ ಮಾಡಲು ಆರಂಭಿಸಿದೆ. ʼವಿದೂಷಕ ಕೊಹ್ಲಿ, ನೀನು ಕಿಂಗ್ ಅಲ್ಲ ಗೂಬೆʼ ಎಂಬ ಶೀರ್ಷಿಕೆಯನ್ನು ಬಳಸಿಕೊಂಡು ಅವಮಾನಿಸಿದೆ. ಕೊಹ್ಲಿ ಕೃತ್ಯದ ಬಗ್ಗೆ ಕೊಹ್ಲಿಯನ್ನು ಸೂಕ್ (ಅಳುವ ಮಗು ಅಥವಾ ಹೇಡಿ) ಎಂದೂ ಕರೆದಿದೆ. ಕೇವಲ ಆಸೀಸ್ ಮಾಧ್ಯಮ ಮಾತ್ರವಲ್ಲದೆ ಭಾರತ ತಂಡ ಮಾಜಿ ಆಟಗಾರರು ಕೂಡ ಕೊಹ್ಲಿಯ ಈ ನಡೆಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಅಭಿಮಾನಿಗಳಿಗೂ ಮುಜುಗರ ಉಂಟುಮಾಡಿದೆ.