Saturday, 11th January 2025

Vijay Hazare Trophy: ಲಿಸ್ಟ್‌ ‘ಎ’ ಪದಾರ್ಪಣೆ ಪಂದ್ಯದಲ್ಲಿಯೇ ಶತಕ ಬಾರಿಸಿದ ಅರ್ಶಿನ್‌ ಕುಲಕರ್ಣಿ!

Arshin Kulkarni HITS century on List A debut against Punjab in Vijay Hazare Trophy

ವಡೋದರ: ಮಹಾರಾಷ್ಟ್ರದ ಯುವ ಬ್ಯಾಟ್ಸ್‌ಮನ್ ಅರ್ಶಿನ್ ಕುಲಕರ್ಣಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ತೋರಿದ್ದಾರೆ. ಅವರು 2024-25ರ ಸಾಲಿನ ವಿಜಯ್ ಹಝಾರೆ ಟ್ರೋಫಿ (Vijay Hazare Trophy) ಟೂರ್ನಿಯ ತಮ್ಮ ಪದಾರ್ಪಣೆ ಪಂದ್ಯದಲ್ಲಿಯೇ ಶತಕವನ್ನು ಸಿಡಿಸಿದ್ದಾರೆ. ಶನಿವಾರ ಇಲ್ಲಿನ ಕೊಟಂಬಿ ಕ್ರೀಡಾಂಗಣದಲ್ಲಿ ಪಂಜಾಬ್ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ 19ನೇ ವಯಸ್ಸಿನ ಅರ್ಶಿನ್ ಈ ಸಾಧನೆಯನ್ನು ಮಾಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಮಹಾರಾಷ್ಟ್ರ ತಂಡದ ಪರ ಇನಿಂಗ್ಸ್‌ ಆರಂಭಿಸಿ ಅರ್ಶಿನ್‌ ಕುಲಕರ್ಣಿ ಗಮನಾರ್ಹ ಪ್ರದರ್ಶನವನ್ನು ತೋರಿದರು. ಮತ್ತೊಂದು ತುದಿಯಲ್ಲಿ ನಾಯಕ ಋತುರಾಜ್‌ ಗಾಯಕ್ವಾಡ್‌ ಓಪನಿಂಗ್‌ಗೆ ಬಂದಿದ್ದರು. ಆದರೆ, ಅರ್ಷದೀಪ್ ಸಿಂಗ್ ಆರಂಭಿಕ ಓವರ್‌ಗಳಲ್ಲಿ ತಮ್ಮ ಸ್ವಿಂಗ್ ಮತ್ತು ಸೀಮ್‌ನಿಂದ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡಿದರು. ಆದರೆ ಎಡಗೈ ಬ್ಯಾಟ್ಸ್‌ಮನ್ ಅರ್ಶಿನ್ ನಿರಂತರವಾಗಿ ರನ್ ಗಳಿಸಿದರು.

ಋತುರಾಜ್‌ ಗಾಯಕ್ವಾಡ್‌ ಮತ್ತು ಸಿದ್ದೇಶ್‌ ವೀರ್‌ ಬಹುಬೇಗ ವಿಕೆಟ್‌ ಒಪ್ಪಿಸಿದರು. ಆದರೆ, ಅವರು ಮೂರನೇ ವಿಕೆಟ್‌ಗೆ ಅಂಕಿತ್ ಬಾವ್ನೆ ಅವರೊಂದಿಗೆ 145 ರನ್‌ಗಳ ಜೊತೆಯಾಟವನ್ನು ಆಡಿದರು ಮತ್ತು 41ನೇ ಓವರ್‌ನಲ್ಲಿ ಅರ್ಷದೀಪ್ ಸಿಂಗ್ ಅವರ ಎಸೆತದಲ್ಲಿ ಒಂದು ರನ್ ಪಡೆಯುವ ಮೂಲಕ ತಮ್ಮ ಚೊಚ್ಚಲ ಶತಕವನ್ನು ಪೂರ್ಣಗೊಳಿಸಿದರು.

ಅರ್ಶಿನ್ ಜೊತೆಗೆ ಬಾವ್ನೆ ಕೂಡ ಉತ್ತಮ ಕೊಡುಗೆ ನೀಡಿ 85 ಎಸೆತಗಳಲ್ಲಿ 60 ರನ್ ಗಳಿಸಿದರು. ನಿಕಿಲ್ ನಾಯಕ್ ಮತ್ತು ಸತ್ಯಜಿತ್ ಬಚಾವ್ ಕೆಲವು ನಿರ್ಣಾಯಕ ರನ್‌ಗಳನ್ನು ಗಳಿಸಿ ಮಹಾರಾಷ್ಟ್ರ ತಂಡವನ್ನು 270ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಒಂದು ಒಂದು ಹಂತದಲ್ಲಿ ಮಹಾರಾಷ್ಟ್ರ 250 ರನ್ ಕೂಡ ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನಿಕಿಲ್ 29 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡ 52 ರನ್‌ಗಳ ಬಿರುಸಿನ ಇನಿಂಗ್ಸ್‌ ಆಡಿದರು. ಆದರೆ ಸತ್ಯಜೀತ್ 15 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಒಳಗೊಂಡ 20 ರನ್ ಗಳಿಸಿದರು.

ಪಂಜಾಬ್ ಪರ ಅರ್ಷದೀಪ್ ಸಿಂಗ್ ಅತ್ಯಂತ ಪ್ರಭಾವಿ ಬೌಲರ್ ಎನಿಸಿಕೊಂಡರು. ಅವರು ತಮ್ಮ 9 ಓವರ್‌ಗಳಲ್ಲಿ 56 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರು. ಅವರು ಮೊದಲ ಓವರ್‌ನಲ್ಲಿಯೇ ಋತುರಾಜ್ ಗಾಯಕ್ವಾಡ್ ಅವರನ್ನು ಬೌಲ್ಡ್ ಮಾಡಿದರು ಮತ್ತು ನಂತರ ಮೂರನೇ ಓವರ್‌ನಲ್ಲಿ ಸಿದ್ಧೇಶ್ ವೀರ್ ಅವರನ್ನು ಔಟ್ ಮಾಡಿದರು. ಅಭಿಷೇಕ್ ಶರ್ಮಾ ಅತ್ಯಂತ ಆರ್ಥಿಕ ಬೌಲರ್ ಆಗಿದ್ದರು. 10 ಓವರ್‌ಗಳಲ್ಲಿ 42 ರನ್ ನೀಡಿ ಒಂದು ವಿಕೆಟ್ ಪಡೆದರು.

ಸೆಮಿಫೈನಲ್‌ಗೇರಿದ ಮಹಾರಾಷ್ಟ್ರ

ಇನ್ನು ಈ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ 70 ರನ್‌ಗಳಿಂದ ಪಂಜಾಬ್‌ ತಂಡವನ್ನು ಮಣಿಸಿತು. ಆ ಮೂಲಕ 2024-25ರ ಸಾಲಿನ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶ ಮಾಡಿದೆ. ಮಹಾರಾಷ್ಟ್ರ ನೀಡಿದ್ದ 276 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಪಂಜಾಬ್‌ ತಂಡ 44.4 ಓವರ್‌ಗಳಿಗೆ 205 ರನ್‌ಗಳಿಗೆ ಆಲ್‌ಔಟ್‌ ಆಯಿತು. ಮಹಾರಾಷ್ಟ್ರ ಪರ ಮುಖೇಶ್‌ ಚೌಧರಿ ಮೂರು ವಿಕೆಟ್‌ ಪಡೆದರು.

ಈ ಸುದ್ದಿಯನ್ನು ಓದಿ: Vijay Hazare Trophy: ಬರೋಡಾವನ್ನು ಮಣಿಸಿ ಸೆಮಿಫೈನಲ್‌ಗೇರಿದ ಕರ್ನಾಟಕ!

Leave a Reply

Your email address will not be published. Required fields are marked *