ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆ ಏಷ್ಯಾಕಪ್ 2022 ಮೇಲೂ ಬೀಳುವ ಸಾಧ್ಯತೆ ದಟ್ಟವಾಗಿದೆ.
ಈ ಹಿನ್ನೆಲೆಯಲ್ಲಿ ಏಷ್ಯಾ ಕಪ್ ಅನ್ನು ಶ್ರೀಲಂಕಾದಿಂದ ಸ್ಥಳಾಂತರಿಸುವ ಸಾಧ್ಯತೆಯಿದೆ ಎಂದು ಶ್ರೀಲಂಕಾ ಕ್ರಿಕೆಟ್ ಕಾರ್ಯ ದರ್ಶಿ ಮೋಹನ್ ಡಿ ಸಿಲ್ವಾ ಭಾನುವಾರ ಹೇಳಿದ್ದಾರೆ.
ಪಂದ್ಯಾವಳಿಯನ್ನು ಯುಎಇಯಲ್ಲಿ ಆಡಬಹುದು ಎಂದು ಹೇಳಿದ್ದು, ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ಶ್ರೀಲಂಕಾ ದೇಶ ಹಲವು ವಾರಗಳಿಂದ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ.
ಆರು ತಂಡಗಳ ಪಂದ್ಯಾವಳಿಯ ದಿನಾಂಕಗಳು ಆಗಸ್ಟ್ 26ರಿಂದ ಸೆಪ್ಟೆಂಬರ್ 11 ರವರೆಗೆ ಮೊದಲೇ ನಿಗದಿಪಡಿಸಿದಂತೆಯೇ ಇರುತ್ತದೆ. ಹಾಂಗ್ ಕಾಂಗ್, ಸಿಂಗಪುರ, ಕುವೈತ್ ಮತ್ತು ಯುಎಇ ಒಂದು ಅರ್ಹತಾ ಸ್ಥಾನಕ್ಕಾಗಿ ಸೆಣಸಾಡುವುದರೊಂದಿಗೆ ಮುಖ್ಯ ಸ್ಪರ್ಧೆಯ ಮೊದಲು ಅರ್ಹತಾ ಪಂದ್ಯವೂ ನಡೆಯುತ್ತದೆ. ಉಳಿದಂತೆ ಅಫ್ಘಾನಿಸ್ತಾನ, ಶ್ರೀಲಂಕಾ, ಪಾಕಿಸ್ತಾನ, ಭಾರತ ಮತ್ತು ಬಾಂಗ್ಲಾದೇಶ ಐದು ಪೂರ್ಣ ಸದಸ್ಯರ ತಂಡಗಳಾಗಿರುತ್ತವೆ.
ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಏಷ್ಯನ್ ತಂಡಗಳಿಗೆ ಈ ಪಂದ್ಯಾವಳಿಯು ಉತ್ತಮ ತಯಾರಿಯಾಗಲಿದೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಯಿಂದ ಟೂರ್ನಮೆಂಟ್ ಸ್ಥಳ ಬದಲಾವಣೆ ಕುರಿತು ಅಧಿಕೃತ ಪ್ರಕಟಣೆಯನ್ನು ಶೀಘ್ರದಲ್ಲೇ ನಿರೀಕ್ಷಿಸ ಲಾಗಿದೆ. ಆದರೆ ಏಷ್ಯಾಕಪ್ ಅನ್ನು ಶ್ರೀಲಂಕಾದಲ್ಲಿ ಆಡಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶನಿವಾರ ಹೇಳಿದೆ.
ಈ ಪಂದ್ಯಾವಳಿಯು ಶ್ರೀಲಂಕಾದಲ್ಲಿ ನಡೆಯದಿದ್ದರೆ, ಅದು ಅವರಿಗೆ ಕ್ರಿಕೆಟ್ ಮತ್ತು ದೊಡ್ಡ ಆರ್ಥಿಕ ನಷ್ಟವನ್ನುಂಟು ಮಾಡು ತ್ತದೆ. ಆಸ್ಟ್ರೇಲಿಯಾದ ಇತ್ತೀಚಿನ ಶ್ರೀಲಂಕಾ ಪ್ರವಾಸವು ಯಾವುದೇ ತೊಂದರೆಗಳಿಲ್ಲದೆ ಸಾಗಿದೆ ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಾಹಕ ಫೈಸಲ್ ಹಸ್ನೇನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶ್ರೀಲಂಕಾದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಸದ್ಯ ಆಸ್ಟ್ರೇಲಿಯಾ ಅಲ್ಲಿ ಆಡುತ್ತಿದೆ. ನಾನು ಈ ಕ್ಷಣದಲ್ಲಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಒಂದು ತಿಂಗಳು ಕಾಯೋಣ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದರು.