Monday, 6th January 2025

BCCIಗೆ ನೂತನ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಖಜಾಂಚಿ ಹುದ್ದಗೆ ಪ್ರಭತೇಜ್‌ ಭಾಟಿಯಾ?

Assam's Devajit Saikia, Prabhtej Bhatia likely to be BCCI secretary and treasurer positions

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ಹುದ್ದೆಗೆ ದೇವಜಿತ್ ಸೈಕಿಯಾ ಹಾಗೂ ಖಜಾಂಚಿ ಹುದ್ದೆಗೆ ಪ್ರಭತೇಜ್ ಭಾಟಿಯಾ ಶನಿವಾರ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಈ ಹುದ್ದೆಗೆ ನಾಮಪತ್ರ ಸಲ್ಲಿಸಿರುವ ಏಕೈಕ ಅಭ್ಯರ್ಥಿಗಳು ಇವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಆಶಿಶ್ ಶೆಲಾರ್ ಅವರ ನಿರ್ಗಮನದೊಂದಿಗೆ ಬಿಸಿಸಿಐನ ಖಜಾಂಚಿ ಹುದ್ದೆ ಖಾಲಿಯಾಗಿದೆ. ಈ ಕಾರಣ ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರಭತೇಜ್‌ ಭಾಟಿಯಾ ಅವರು ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದಲ್ಲಿ ಶೆಲಾರ್ ಅವರು ಇತ್ತೀಚೆಗೆ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಬಿಸಿಸಿಐನ ಖಜಾಂಚಿ ಸ್ಥಾನವನ್ನು ತೊರೆದಿದ್ದಾರೆ.

ಜಯ ಶಾ ಅವರು ಡಿಸೆಂಬರ್ ಒಂದರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾದ ನಂತರ ಬಿಸಿಸಿಐನ ಹಂಗಾಮಿ ಕಾರ್ಯದರ್ಶಿಯಾಗಿ ದೇವಜಿತ್‌ ಸೈಕಿಯಾ ಕಾರ್ಯನಿರ್ವಹಿಸುತ್ತಿದ್ದಾರೆ. ಶಾ ರಾಜೀನಾಮೆ ನೀಡಿದ ನಂತರ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ಸೈಕಿಯಾ ಅವರನ್ನು ಹಂಗಾಮಿ ಕಾರ್ಯದರ್ಶಿಯಾಗಿ ನೇಮಿಸಿದ್ದರು. ಇದೀಗ ಅವರನ್ನೇ ಪೂರ್ಣ ಪ್ರಮಾಣದ ಕಾರ್ಯದರ್ಶಿಯಾಗಿ ಮುಂದುವರಿಸುವ ಸಾಧ್ಯತೆ ಇದೆ.

ಬಿಸಿಸಿಐ ವೆಬ್‌ಸೈಟ್‌ನಲ್ಲಿರುವ ಚುನಾವಣಾ ವೇಳಾಪಟ್ಟಿಯ ಪ್ರಕಾರ ಶನಿವಾರ ಸಂಜೆ 4 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿತ್ತು. ಸೈಕಿಯಾ ಮತ್ತು ಭಾಟಿಯಾ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಇವರನ್ನು ಹೊರತುಪಡಿಸಿ ಬೇರೆ ಯಾರೂ ಕೂಡ ನಾಮಪತ್ರಗಳನ್ನು ಸಲ್ಲಿಸಲು ಆಸಕ್ತಿ ತೋರಿಸಿಲ್ಲ. ಈ ಹಿನ್ನೆಲೆಯಲ್ಲಿ ಈ ಇಬ್ಬರೂ ಅವಿರೋಧವಾಗಿ ಈ ಹುದ್ದಗೆ ಆಯ್ಕೆಯಾಗಲಿದ್ದಾರೆ.

ದೇವಜಿತ್‌ ಸೈಕಿಯಾ ಯಾರು?

ದೇವಜಿತ್‌ ಸೈಕಿಯಾ ಅವರು ಮೂಲತಃ ಅಸ್ಸಾಂ ರಾಜ್ಯದವರು. ಅವರು ವಕೀಲರು ಹಾಗೂ ಪ್ರಥಮ ದರ್ಜೆ ಕ್ರಿಕೆಟಿಗರಾಗಿದ್ದಾರೆ. ಇದರ ಜೊತೆಗೆ ಅವರು ಕ್ರಿಕೆಟ್‌ ಆಡಳಿತ ಮಂಡಳಿಯಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ. ಇವರು ಅಸ್ಸಾಂ ರಣಜಿ ತಂಡವನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ್ದಾರೆ. ತಮ್ಮ ಕ್ರಿಕೆಟ್‌ ದಿನಗಳಲ್ಲಿ ಇವರು ವಿಕೆಟ್‌ ಕೀಪರ್‌ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿದ್ದರು. ಇವರು ಅಸ್ಸಾಂ ಕ್ರಿಕೆಟ್‌ ಅಸೋಸಿಯೇಷನ್‌ನಲ್ಲಿಯೂ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ಭಾರತಕ್ಕೆ 145 ರನ್‌ ಮುನ್ನಡೆ, ಸಿಡ್ನಿ ಟೆಸ್ಟ್‌ನಲ್ಲಿ ಅತ್ಯಂತ ಯಶಸ್ವಿ ರನ್ ಚೇಸ್ ಎಷ್ಟು?