Saturday, 4th January 2025

AUS vs IND: ʻಸಿಡ್ನಿ ಟೆಸ್ಟ್‌ಗೆ ಆಕಾಶ ದೀಪ್‌ ಇಲ್ಲʼ-ಖಚಿತಪಡಿಸಿದ ಗೌತಮ್‌ ಗಂಭೀರ್‌!

AUS vs IND: Akash Deep out of Sydney Test with back issue, confirms coach Gautam Gambhir

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಐದನೇ ಹಾಗೂ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ (AUS vs IND) ಸರಣಿಯ ಕೊನೆಯ ಪಂದ್ಯದಿಂದ ವೇಗಿ ಆಕಾಶ್‌ ದೀಪ್‌ ಹೊರಗುಳಿಯಲಿದ್ದಾರೆಂದು ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಸ್ಪಷ್ಟಪಡಿಸಿದ್ದಾರೆ. ಆಕಾಶ್‌ ಸದ್ಯ ಬೆನ್ನು ನೋವಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಳೆದ ಎರಡು ಟೆಸ್ಟ್‌ ಪಂದ್ಯಗಳಿಂದ ಆಕಾಶ ದೀಪ್‌ ಐದು ವಿಕೆಟ್‌ಗಳನ್ನು ಕಬಳಿಸಿದ್ದರು.

ಐದನೇ ಟೆಸ್ಟ್‌ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌತಮ್‌ ಗಂಭೀರ್‌ಗೆ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪ್ರಸಕ್ತ ಸರಣಿಯಲ್ಲಿ 28ರ ಪ್ರಾಯದ ವೇಗಿ ಒಟ್ಟು 87.5 ಓವರ್‌ಗಳನ್ನು ಬೌಲ್‌ ಮಾಡಿದ್ದಾರೆ. ಆದರೆ, ಅವರು ಸದ್ಯ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದು, ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಕಾರಣ ಅವರನ್ನು ಅಂತಿಮ ಟೆಸ್ಟ್‌ನಿಂದ ಹೊರಗಿಳಿಯಲಾಗುತ್ತದೆ. ಇದೀಗ ಸಿಡ್ನಿ ಟೆಸ್ಟ್‌ನಲ್ಲಿ ಆಕಾಶ್‌ ದೀಪ್‌ ಅವರ ಸ್ಥಾನದಲ್ಲಿ ಹರ್ಷಿತ್‌ ರಾಣಾ ಅಥವಾ ಪ್ರಸಿಧ್‌ ಕೃಷ್ಣ ಅವರನ್ನು ಆಡಿಸಬಹುದು. ಸದ್ಯ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ 1-2 ಹಿನ್ನಡೆಯನ್ನು ಅನುಭವಿಸಿದೆ.

ಈ ಸರಣಿಯ ಆರಂಭಿಕ ಪಂದ್ಯದಿಂದಲೂ ತಂಡದ ಪ್ಲೇಯಿಂಗ್‌ XIನಲ್ಲಿ ಬದಲಾವಣೆಯನ್ನು ತರಲಾಗುತ್ತಿದೆ. ಅದರಂತೆ ಪರ್ತ್‌ ಟೆಸ್ಟ್‌ನಲ್ಲಿ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್‌ ಅಶ್ವಿನ್‌ ಅವರನ್ನು ಕೈ ಬಿಡಲಾಗಿತ್ತು. ವಾಷಿಂಗ್ಟನ್‌ ಸುಂದರ್‌ಗೆ ಅವಕಾಶ ನೀಡಲು ಆರ್‌ ಅಶ್ವಿನ್‌ ಅವರನ್ನು ಕೂರಿಸಲಾಗಿತ್ತು. ಪರ್ತ್‌ನಲ್ಲಿ ಹರ್ಷಿತ್‌ ರಾಣಾ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು ಹಾಗೂ ಅಡಿಲೇಡ್‌ ಟೆಸ್ಟ್‌ನಲ್ಲಿಯೂ ಆಡಿದ್ದರು. ಸತತ ಪಂದ್ಯಗಳಲ್ಲಿ ದೀರ್ಘಾವಧಿ ಸ್ಪೆಲ್‌ಗಳನ್ನು ಹಾಕುವಲ್ಲಿ ಎಡವಿದ್ದರು.

ಆದರೆ, ಮೆಲ್ಬರ್ನ್‌ ಟೆಸ್ಟ್ ಪಂದ್ಯದಲ್ಲಿ ಮೂವರು ಆಲ್‌ರೌಂಡರ್‌ಗಳನ್ನು ಕಣಕ್ಕೆ ಇಳಿಸಲಾಗಿತ್ತು. ನಿತೀಶ್‌ ರೆಡ್ಡಿ, ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್‌ ಸುಂದರ್‌ ಅವರನ್ನು ಆಡಿಸಲಾಗಿತ್ತು. ಮೂರನೇ ಕ್ರಮಾಂಕದ ಶುಭಮನ್‌ ಗಿಲ್‌ ಬದಲು ಕೆಎಲ್‌ ರಾಹುಲ್‌ ಮೂರನೇ ಕ್ರಮಾಂಕದಲ್ಲಿ ಆಡಲು ಅವಕಾಶ ಪಡೆದಿದ್ದರು. ಆ ಮೂಲಕ ಇನಿಂಗ್ಸ ಆರಂಭಿಸಲು ನಾಯಕ ರೋಹಿತ್‌ ಶರ್ಮಾಗೆ ಅವಕಾಶ ನೀಡಲಾಗಿತ್ತು. ಇದೀಗ ಐದನೇ ಟೆಸ್ಟ್‌ನಲ್ಲಿಯೂ ಕೆಎಲ್‌ ರಾಹುಲ್‌ ಇನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ.

ಮಿಚೆಲ್‌ ಮಾರ್ಷ್‌ ಔಟ್‌

ಐದನೇ ಹಾಗೂ ಸರಣಿ ನಿರ್ಣಾಯಕ ಪಂದ್ಯಕ್ಕೆ ಆಸ್ಟ್ರೇಲಿಯಾ ಪ್ಲೇಯಿಂಗ್‌ XIನಿಂದ ಮಿಚೆಲ್‌ ಮಾರ್ಷ್‌ ಅವರನ್ನು ಕೈ ಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ತಸ್ಮೇನಿಯಾದ ಆಲ್‌ರೌಂಡರ್‌ ಬೇ ವೆಬ್‌ಸ್ಟರ್‌ ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಪಂದ್ಯ ಪೂರ್ವ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ನಾಯಕ ಪ್ಯಾಟ್‌ ಕಮಿನ್ಸ್‌ ಬಹಿರಂಗಪಡಿಸಿದ್ದಾರೆ. ಮಿಚೆಲ್‌ ಮಾರ್ಷ್‌ ಈ ಸರಣಿಯಲ್ಲಿ ಕೇವಲ 73 ರನ್‌ಗಳಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 33 ಓವರ್‌ಗಳನ್ನು ಬೌಲ್‌ ಮಾಡಿ ಕೇವಲ ಮೂರು ವಿಕೆಟ್‌ ಕಿತ್ತಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ʻಹೊರಗಡೆ ಮಾತುಗಳಿಗೆ ಕಿವಿ ಕೊಡಬೇಡಿʼ-ಗೌತಮ್ ಗಂಭೀರ್‌ಗೆ ರವಿ ಶಾಸ್ತ್ರಿ ಸಲಹೆ!