Wednesday, 25th December 2024

AUS vs IND: ನಾಲ್ಕನೇ ಟೆಸ್ಟ್‌ಗೆ ಪ್ಲೇಯಿಂಗ್‌ ಇಲೆವೆನ್‌ ಪ್ರಕಟಿಸಿದ ಆಸೀಸ್‌

ಮೆಲ್ಬರ್ನ್‌: ನಾಳೆಯಿಂದ ಆರಂಭವಾಗಲಿರುವ ಭಾರತ(AUS vs IND) ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿಯೇ ಆಸ್ಟ್ರೇಲಿಯಾ ತನ್ನ ಆಡುವ ಬಳಗವನ್ನು ಪ್ರಕಟಿಸಿದೆ. ಮೂರನೇ ಪಂದ್ಯದ ವೇಳೆ ತೊಡೆ ಸಂದು ಗಾಯಕ್ಕೆ ತುತ್ತಾಗಿದ್ದ ಟ್ರಾವಿಸ್‌ ಹೆಡ್‌ ಫಿಟ್‌ ಆಗಿದ್ದು ನಾಲಕ್ನೇ ಪಂದ್ಯದಲ್ಲಿಯೂ ಆಡಲಿದ್ದಾರೆ. 19 ವರ್ಷದ ಸ್ಯಾಮ್‌ ಕೋನ್‌ಸ್ಟಾಸ್‌ ಕೂಡ ಆಡುವ ಬಳಗದಲ್ಲಿ ಅವಕಾಶಗಿಟ್ಟಿಸಿಕೊಂಡಿದ್ದಾರೆ. ಇದು ಅವರ ಪದಾರ್ಪಣ ಪಂದ್ಯವಾಗಿದೆ. ಪ್ರೈಮ್ ಮಿನಿಸ್ಟರ್ಸ್ XI ಅಭ್ಯಾಸ ಪಂದ್ಯದಲ್ಲಿ ಶತಕ ಬಾರಿಸಿದ್ದರು.

ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ವೇಗಿ ಜೋಶ್‌ ಹ್ಯಾಜಲ್‌ವುಡ್‌ ಅವರ ಸ್ಥಾನದಲ್ಲಿ ಸ್ಕಾಟ್ ಬೋಲ್ಯಾಂಡ್ ಆಡಲಿದ್ದಾರೆ. ಬೋಲ್ಯಾಂಡ್ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿಯೂ ಹ್ಯಾಜಲ್‌ವುಡ್‌ ಅನುಪಸ್ಥಿತಿಯಲ್ಲಿ ಆಡಿದ್ದರು.

ಡಿಸೆಂಬರ್ 2024 ರಲ್ಲಿ, ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಥಂಡರ್‌ ಪರ ಸ್ಯಾಮ್‌ ಕೋನ್‌ಸ್ಟಾಸ್‌ ಪಾದರ್ಪಣೆ ಮಾಡಿದ್ದರು. ಡೇವಿಡ್ ವಾರ್ನರ್ ಜತೆಗೆ ಆರಂಭಿಕರಾಗಿ ಆಡಿದ್ದ ಅವರು, 26 ಎಸೆತಗಳಲ್ಲಿ 57 ರನ್ ಬಾರಿಸಿ ಗಮನಸೆಳೆದಿದ್ದರು. ಈ ಮೂಲಕ ಸಿಡ್ನಿ ಥಂಡರ್ ತಂಡದ ಪರ ಅತ್ಯಂತ ವೇಗದ ಅರ್ಧಶತಕವನ್ನು ಬಾರಿಸಿದ ದಾಖಲೆ ಬರೆದಿದ್ದರು. ಭಾರತ ಎ ವಿರುದ್ಧದ ಅನಧಿಕೃತ ಟೆಸ್ಟ್‌ನ ದ್ವಿತೀಯ ಪಂದ್ಯದಲ್ಲಿ 73  ರನ್‌ ಗಳಿಸಿದ್ದರು. ಇದೀಗ ಆಸೀಸ್‌ ತಂಡದಲ್ಲಿ ಅವಕಾಶ ಪಡೆದ ಕೋನ್‌ಸ್ಟಾಸ್‌ ಅಂತಿಮ ಎರಡು ಟೆಸ್ಟ್‌ನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದರೆ ಆಸೀಸ್‌ ತಂಡದ ಭವಿಷ್ಯದ ಆಟಗಾರನಾಗಿ ಬೆಳೆಯಲಿದ್ದಾರೆ.

ಆಸ್ಟ್ರೇಲಿಯಾ ತಂಡ

ಉಸ್ಮಾನ್ ಖವಾಜಾ, ಸ್ಯಾಮ್‌ ಕೋನ್‌ಸ್ಟಾಸ್‌, ಮಾರ್ನಸ್ ಲಬೆಶೇನ್‌, ಸ್ಟೀವನ್‌ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್‌ ಮಾರ್ಷ್, ಅಲೆಕ್ಸ್ ಕ್ಯಾರಿ (ವಿ.ಕೀ), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.