ಸಿಡ್ನಿ: ಆಸ್ಟ್ರೇಲಿಯದ ಪ್ರಧಾನಿ ಆ್ಯಂಟನಿ ಅಲ್ಬನೀಸ್(Anthony Albanese) ಬುಧವಾರ ಎರಡೂ ತಂಡಗಳ ಆಟಗಾರರನ್ನು ಭೇಟಿ ಮಾಡಿದ್ದರು. ಇದೇ ವೇಳೆ ಟೀಮ್ ಇಂಡಿಯಾದ(AUS vs IND) ವೇಗಿ ಜಸ್‌ಪ್ರೀತ್ ಬುಮ್ರಾ(Jasprit Bumrah) ಅವರನ್ನು ವಿಶೇಷವಾಗಿ ಕೊಂಡಾಡಿದ್ದರು. ನಾವು ಇಲ್ಲಿ (ಆಸ್ಟ್ರೇಲಿಯಾದಲ್ಲಿ) ಒಂದು ಕಾನೂನು ಜಾರಿ ಮಾಡಬೇಕು. ಅದರಂತೆ ಬುಮ್ರಾ ಇಲ್ಲಿ ಎಡಗೈನಲ್ಲಿ ಬೌಲಿಂಗ್ ಮಾಡಬೇಕು ಅಥವಾ ಒಂದೇ ಸ್ಟೆಪ್ ರನ್‌ಅಪ್ ನಿಂದ ಬೌಲಿಂಗ್ ಮಾಡಬೇಕು ಎಂಬ ನಿಯಮ ಮಾಡಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದ್ದರು.
ಬುಮ್ರಾ ಐಸಿಸಿ ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. 907 ಅಂಕ ಹೊಂದುವ ಮೂಲಕ ಭಾರತೀಯ ದಾಖಲೆ ಸ್ಥಾಪಿಸಿದ್ದಾರೆ. ಈ ಹಾದಿಯಲ್ಲಿ ಆರ್. ಅಶ್ವಿನ್ ಅವರ 904 ಅಂಕಗಳ ದಾಖಲೆಯನ್ನು ಮುರಿದರು.
ಸಿಡ್ನಿಯಲ್ಲಿ ಭಾರತದ ದಾಖಲೆ
ಸಿಡ್ನಿಯಲ್ಲಿ ಭಾರತ ಇದುವರೆಗೆ 13 ಪಂದ್ಯಗಳನ್ನು ಆಡಿ ಗೆದ್ದಿರುವುದು ಕೇವಲ ಒಂದು ಪಂದ್ಯ ಮಾತ್ರ. ಈ ಗೆಲುವು ದಾಖಲಾದದ್ದು 1978ರಲ್ಲಿ. ಬಿಶನ್ ಸಿಂಗ್ ಬೇಡಿ ಸಾರಥ್ಯದಲ್ಲಿ ಇನಿಂಗ್ಸ್ ಹಾಗೂ 2 ರನ್ ಗೆಲುವು ಸಾಧಿಸಿತ್ತು. ಇದಾದ ಬಳಿಕ ಭಾರತ ಇಲ್ಲಿ ಗೆಲುವು ಕಂಡಿಲ್ಲ. ಆದರೆ ಏಳು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. 5 ರಲ್ಲಿ ಸೋಲು ಕಂಡಿದೆ. ಇತ್ತಂಡಗಳು ಸಿಡ್ನಿಯಲ್ಲಿ ಮೊದಲ ಮುಖಾಮುಖಿಯಾಗಿದ್ದು 1947ರಲ್ಲಿ. ಈ ಪಂದ್ಯ ಡ್ರಾದಲ್ಲಿ ಮುಕ್ತಾಯ ಕಂಡಿತ್ತು.
ಭಾರತ ತಂಡ ಇಲ್ಲಿ ಕೊನೆಯ ಬಾರಿಗೆ ಸೋಲು ಕಂಡದ್ದು 2012ರಲ್ಲಿ. ಇದಾದ ಬಳಿಕ ಈ ವರೆಗೆ ಆಡಿದ ಮೂರು ಪಂದ್ಯಗಳನ್ನು ಡ್ರಾ ಸಾಧಿಸಿದೆ. ಆದರೆ ಈ ಬಾರಿ ಗೆಲುವು ಅನಿವಾರ್ಯ. ಡ್ರಾ ಗೊಂಡರೆ ಸರಣಿ ಸೋಲಿನ ಜತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಿಂದಲೂ ಅಧಿಕೃತವಾಗಿ ಹೊರ ಬೀಳಲಿದೆ. ಒಂದೊಮ್ಮೆ ಭಾರತ ಈ ಪಂದ್ಯದಲ್ಲಿ ಸೋತರೆ ಹಿರಿಯರಾದ ರೋಹಿತ್ ಶರ್ಮ, ರವೀಂದ್ರ ಜಡೇಜಾ ಮತ್ತು ವಿರಾಟ್ ಕೊಹ್ಲಿಯ ಟೆಸ್ಟ್ ಭವಿಷ್ಯ ಬಹುತೇಕ ಕೊನೆಗೊಳ್ಳುವು ಸಾಧ್ಯತೆ ಇದೆ. ಈಗಾಗಲೇ ರೋಹಿತ್ ಮತ್ತು ಕೊಹ್ಲಿ ನಿವೃತ್ತಿ ಕುರಿತಂತೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಇವರೆಲ್ಲ ಆಡಿದ್ದು ಸಾಕು ಯುವ ಆಟಗಾರರಿಗೆ ಅವಕಾಶ ನೀಡಿದರೆ ಉತ್ತಮ ಎಂಬ ಮಾತುಗಳು ಕೇಳಿ ಬಂದಿದೆ.