Monday, 30th December 2024

AUS vs IND: 147 ವರ್ಷಗಳ ಟೆಸ್ಟ್‌ ಇತಿಹಾಸದಲ್ಲಿ ನೂತನ ದಾಖಲೆ ಬರೆದ ಬುಮ್ರಾ

ಮೆಲ್ಬರ್ನ್‌: ಭಾರತ ತಂಡದ ವೇಗಿ ಜಸ್‌ಪ್ರೀತ್‌ ಬುಮ್ರಾ(Jasprit Bumrah) ಅವರು 147 ವರ್ಷಗಳ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ನೂತನ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ. ಆಸೀಸ್‌(AUS vs IND) ವಿರುದ್ಧದ ನಾಲ್ಕನೇ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ ಕೀಳುತ್ತಿದ್ದಂತೆ ತಮ್ಮ ಟೆಸ್ಟ್‌ ಕ್ರಿಕೆಟ್‌ ಬಾಳ್ವೆಯಲ್ಲಿ 200 ವಿಕೆಟ್‌ಗಳ ಗಡಿ ದಾಟಿದ್ದಾರೆ. ಇದೇ ವೇಳೆ ದಾಖಲೆಯೊಂದನ್ನು ಕೂಡ ನಿರ್ಮಿಸಿದ್ದಾರೆ.

ಹೌದು, ನಾಲ್ಕನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ ಕಡೆವಿದ್ದ ಬುಮ್ರಾ, ದ್ವಿತೀಯ ಇನಿಂಗ್ಸ್‌ನಲ್ಲಿಯೂ ಸದ್ಯ ನಾಲ್ಕು ವಿಕೆಟ್‌ ಕಿತ್ತು ಒಟ್ಟು 8 ವಿಕೆಟ್‌ ಕಲೆಹಾಕಿದ್ದಾರೆ. ಈ ಸಾಧನೆಯ ಮೂಲಕ ಅವರು 20 ಕ್ಕಿಂತ ಕಡಿಮೆ ಅವರೇಜ್​ನಲ್ಲಿ 200 ವಿಕೆಟ್ ಕಬಳಿಸಿದ ವಿಶ್ವದ ಮೊದಲ ಬೌಲರ್ ಎಂಬ ಹೊಸ ಮೈಲುಗಲ್ಲು ನೆಟ್ಟರು. ಬುಮ್ರಾಗೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್​ನ ಜೋಯಲ್ ಗಾರ್ನರ್ ಹೆಸರಿನಲ್ಲಿತ್ತು. ಅವರು 20.34 ರ ಸರಾಸರಿಯಲ್ಲಿ 200 ವಿಕೆಟ್ ಕಬಳಿಸಿದ್ದರು.

200 ವಿಕೆಟ್‌ ಪೂರ್ತಿಗೊಳಿದ ಭಾರತದ 6ನೇ ವೇಗಿ ಎನಿಸಿಕೊಂಡರು. ಕಪಿಲ್ ದೇವ್, ಇಶಾಂತ್ ಶರ್ಮಾ, ಜಾವಗಲ್ ಶ್ರೀನಾಥ್, ಜಹೀರ್‌ ಖಾನ್‌ ಮತ್ತು ಮೊಹಮ್ಮದ್ ಶಮಿ ಉಳಿದ ಸಾಧಕರು.

ಭಾರತ ಬಿಗಿ ಹಿಡಿತ

ದಿಟ್ಟ ಹೋರಾಟ ನಡೆಸುತ್ತಿರುವ ಭಾರತ ಪಂದ್ಯವನ್ನು ಗೆಲ್ಲುವ ಸಾಧ್ಯತೆಯೊಂದು ಕಂಡುಬಂದಿದೆ. ದ್ವಿತೀಯ ಇನಿಂಗ್ಸ್‌ ಆರಂಭಿಸಿರುವ ಆಸೀಸ್‌ ಸತತ ವಿಕೆಟ್‌ ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿದೆ. ಸದ್ಯ 130 ರನ್‌ಗೆ 6 ವಿಕೆಟ್‌ ಕಳೆದುಕೊಂಡಿದೆ. ಮಾರ್ನಸ್‌ ಲಬುಶೇನ್‌ ಮತ್ತು ಪ್ಯಾಟ್‌ ಕಮಿನ್ಸ್‌ ಬ್ಯಾಟಿಂಗ್‌ ನಡೆಸುತ್ತಿದ್ದಾರೆ. ಭಾರತ ಪರ ಬುಮ್ರಾ 4, ಜಸ್‌ಪ್ರೀತ್‌ ಬುಮ್ರಾ 2 ವಿಕೆಟ್‌ ಕಿತ್ತಿದ್ದಾರೆ.

ಭಾರತ ತಂಡ ಕಳೆದೆರಡು ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲೂ ಮೆಲ್ಬರ್ನ್‌ ಟೆಸ್ಟ್‌ನಲ್ಲಿ ಗೆದ್ದಿದೆ. 2018-19ರಲ್ಲಿ 137 ರನ್‌ಗಳಿಂದ ಜಯಗಳಿಸಿದ್ದರೆ, 2020-21ರಲ್ಲಿ ಭಾರತ 8 ವಿಕೆಟ್‌ ಜಯಭೇರಿ ಬಾರಿಸಿತ್ತು. ಇದೀಗ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದೆ.