ಸಿಡ್ನಿ: ಬಾರ್ಡರ್-ಗಾವಸ್ಕರ್ ಟ್ರೋಫಿ(Border-Gavaskar Trophy) ಟೆಸ್ಟ್ ಸರಣಿಯ ಅಂತ್ಯದಲ್ಲಿ ಟ್ರೋಫಿ ವಿತರಣೆಯ ವೇಳೆ ಆತಿಥೇಯ ಆಸ್ಟ್ರೆಲಿಯಾ(AUS vs IND) ವೇದಿಕೆಗೆ ಕರೆಯದ ಬಗ್ಗೆ ಭಾರತದ ಮಾಜಿ ನಾಯಕ ಸುನೀಲ್ ಗಾವಸ್ಕರ್(Sunil Gavaskar) ಬೇಸರ ವ್ಯಕ್ತಪಡಿಸಿದ್ದಾರೆ. ಆಸೀಸ್ ಸರಣಿ ಗೆದ್ದಿದ್ದರೂ, ಟ್ರೋಫಿ ವಿತರಿಸಲು ನನಗೆ ಸಂಕೋಚ ಇರಲಿಲ್ಲ. ಅವರು ಉತ್ತಮ ಕ್ರಿಕೆಟ್ ಆಡಿ ಗೆದ್ದರು. ನಾನೋರ್ವ ಭಾರತೀಯನಾಗಿರುವ ಕಾರಣಕ್ಕಾಗಿ ಕಡೆಗಣಿಸಬಾರದಿತ್ತು ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ರಿಕೆಟ್ ಆಸ್ಟ್ರೆಲಿಯಾ ಭಾರತ ತಂಡ ಗೆದ್ದಿದ್ದರೆ ಮಾತ್ರ ಟ್ರೋಫಿ ವಿತರಣೆಗೆ ಗಾವಸ್ಕರ್ರನ್ನು ಕರೆಯುವ ಯೋಜನೆ ನಮ್ಮದಾಗಿತ್ತು ಎಂದು ಸ್ಪಷ್ಟಪಡಿಸಿದೆ. ಆದರೆ ಆಸೀಸ್ ಈ ಬಾರಿಯ ಪ್ರವಾಸದಲ್ಲಿ ಭಾರತೀಯರನ್ನು ಕಡೆಗಣಿಸಿದ್ದೇ ಹೆಚ್ಚು. ಅಲ್ಲಿನ ಅಭಿಮಾನಿಗಳು ಕೂಡ ಭಾರತೀಯ ಅಭಿಮಾನಿಗಳಿಗೆ ಮತ್ತು ಆಟಗಾರರನ್ನು ನಿಂದಿಸುವ ಕೆಲಸವನ್ನು ಮಾಡಿದ್ದಾರೆ.
ಮೂರನೇ ದಿನದಾಟವಾದ ಭಾನುವಾರ ಭಾರತ ತಂಡ ಫೀಲ್ಡಿಂಗ್ ನಡೆಸುತ್ತಿದ್ದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಆಸ್ಟ್ರೇಲಿಯಾದ ಕ್ರಿಕೆಟ್ ಅಭಿಮಾನಿಗಳು ಭಾರತೀಯ ಆಟಗಾರರು ಸ್ಯಾಂಡ್ ಪೇಪರ್ ಬಳಿಸಿ ವಿಕೆಟ್ ಕೀಳುತ್ತಿದ್ದಾರೆ ಎಂದು ಲೇವಡಿ ಮಾಡಿದ್ದರು. ಆದರೆ ಇದಕ್ಕೆ ವಿರಾಟ್ ಕೊಹ್ಲಿ ತಕ್ಕ ತಿರುಗೇಟು ಕೂಡ ನೀಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಚೆಂಡು ವಿರೂಪ ಮಾಡಿ ಒಂದು ವರ್ಷ ನಿಷೇಧಕ್ಕೊಳಗಾದ ಸ್ಟೀವನ್ ಸ್ಮಿತ್ ವಿಕೆಟ್ ಬೀಳುತ್ತಿದ್ದಂತೆ ವಿರಾಟ್ ಕೊಹ್ಲಿ ಅವರು ಲೇವಡಿ ಮಾಡಿದ ಅಭಿಮಾನಿಗಳಿಗೆ ನಮ್ಮ ಬಳಿ ಸ್ಯಾಂಡ್ ಪೇಪರ್ ಇಲ್ಲ ಎಂದು ಜೇಬು ತೋರಿಸುವ ಮೂಲಕ ಉತ್ತರ ನೀಡಿದ್ದರು.
ಇದು ಮಾತ್ರವಲ್ಲದೆ 19 ವರ್ಷದ ಸ್ಯಾಮ್ ಕೊನ್ಸ್ಟಾಸ್ ಅನಗತ್ಯವಾಗಿ ಜಸ್‌ಪ್ರೀತ್ ಬುಮ್ರಾ ಅವರನ್ನು ಕೆಣಕಿ ಮೈದಾನದಲ್ಲೇ ವಾಗ್ವಾದ ನಡೆಸಿದ್ದರು. ಅಲ್ಲದೆ ಪಂದ್ಯದ ವೇಳೆ ಭಾರತೀಯ ಆಟಗಾರರ ವಿಕೆಟ್ ಬಿದ್ದಾಗಲೂ ಅತಿಯಾದ ಸಂಭ್ರಮಾಚರಣೆ ನಡೆಸುವ ಮೂಲಕ ನಿಂದಿಸುವ ಕೆಲಸ ಮಾಡಿದ್ದರು.
ಕೊನ್ಸ್ಟಾಸ್ ದುರ್ವರ್ತನೆಗೆ ಬೆಂಬಲ ಸೂಚಿಸಿ ಜಸ್‌ಪ್ರೀತ್ ಬುಮ್ರಾ ಅವರನ್ನು ದೂರಿದ್ದ ಆಸೀಸ್ ಕೋಚ್ ಆ್ಯಂಡ್ರ್ಯೂ ಮೆಕ್ಡೊನಾಲ್ಡ್ಗೂ ತಕ್ಕ ತಿರುಗೇಟು ನೀಡಿದ್ದರು. ‘ಕ್ರಿಕೆಟ್‌ನಲ್ಲಿ ತುಂಬಾ ಮೃದು ಸ್ವಭಾವದಲ್ಲಿ ಇರಲು ಸಾಧ್ಯವಿಲ್ಲ. ಇಲ್ಲಿ ಸ್ಯಾಮ್ಗೆ ಭಯ ಹುಟ್ಟಿಸುವಂಥದ್ದೇನೂ ಇರಲಿಲ್ಲ ಎಂದು ನಾನು ಭಾವಿಸುತ್ತೇನೆ. ಸ್ಟ್ರೈಕ್ನಲ್ಲಿದ್ದ ಉಸ್ಮಾನ್ ಖವಾಜಾ ಅನಗತ್ಯವಾಗಿ ಸಮಯ ವ್ಯರ್ಥ ಮಾಡುತ್ತಿರುವ ಬಗ್ಗೆ ಬುಮ್ರಾ ಪ್ರಶ್ನಿಸಿದ್ದು ಸರಿಯಾಗಿಯೇ ಇದೆ. ಇಲ್ಲಿ ಕೊನ್ಸ್ಟಾಸ್ ಮಧ್ಯ ಪ್ರವೇಶಿಸುವ ಅಗತ್ಯವೇ ಇರಲಿಲ್ಲ. ಮಧ್ಯೆ ಪ್ರವೇಶಿಸುವುದು ಅಂಪೈರ್ ಕೆಲಸವಾಗಿತ್ತು. ಹೀಗಿರುವಾಗ ಆತನಿಗೆ ಅಲ್ಲಿ ಏನು ಕೆಲಸ’ ಎಂದು ಹೇಳುವ ಮೂಲಕ ಕೊನ್ಸ್ಟಾಸ್ನದ್ದೇ ತಪ್ಪು ಎಂದು ಗಂಭೀರ್ ಭಾನುವಾರದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.