ಸಿಡ್ನಿ: ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಅವರು ಆಸ್ಟ್ರೇಲಿಯಾ(AUS vs IND) ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಒಂದು ವಿಕೆಟ್ ಕೀಳುವ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್ ಬಾಳ್ವೆಯಲ್ಲಿ 100 ವಿಕೆಟ್ ಪೂರ್ತಿಗೊಳಿಸಿದ್ದಾರೆ. ಜತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 100 ವಿಕೆಟ್ ಮೈಲುಗಲ್ಲು ತಲುಪಿದ ನಾಲ್ಕನೇ ಭಾರತೀಯ ಬೌಲರ್ ಎನಿಸಿಕೊಂಡರು.
31 ವರ್ಷದ ಸಿರಾಜ್, ಡಿಸೆಂಬರ್ 2020 ರಲ್ಲಿ ಆಸ್ಟ್ರೇಲಿಯಾ ವಿರುದ್ದ ಆಡುವ ಮೂಲಕ ಭಾರತ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದೀಗ ಆಸೀಸ್ ವಿರುದ್ಧವೇ 100 ವಿಕೆಟ್ ಪೂರ್ತಿಗೊಳಿಸಿರುವುದು ವಿಶೇಷ. ಒಟ್ಟಾರೆ ಭಾರತ ಪರ ಅವರು 36 ಟೆಸ್ಟ್ ಪಂದ್ಯ ಆಡಿದ್ದಾರೆ. ಮೂರು ಬಾರಿ 3 ಐದು ವಿಕೆಟ್ ಗೊಂಚಲು ಪಡೆದಿದ್ದಾರೆ.
ಭಾರತ ಪರ ಡಬ್ಲ್ಯುಟಿಸಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಅಶ್ವಿನ್ ಹೆಸರಿನಲ್ಲಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ 38 ವರ್ಷದ ಅಶ್ವಿನ್, 41 ವಿಶ್ವ ಟೆಸ್ಟ್ ಪಂದ್ಯಗಳನ್ನಾಡಿ 195 ವಿಕೆಟ್ ಕಿತ್ತಿದ್ದಾರೆ. ಅಶ್ವಿನ್ ನಂತರದ ಸ್ಥಾನದಲ್ಲಿ 35 ಪಂದ್ಯಗಳಲ್ಲಿ 156 ವಿಕೆಟ್ ಪಡೆದಿರುವ ಬುಮ್ರಾ ಮತ್ತು ರವೀಂದ್ರ ಜಡೇಜಾ (39 ಪಂದ್ಯಗಳಲ್ಲಿ 131 ವಿಕೆಟ್) ಇದ್ದಾರೆ. ಸಿರಾಜ್‌ಗೆ ನಾಲ್ಕನೇ ಸ್ಥಾನ.
ಒಂದು ರನ್ ಅಂತರದಿಂದ ದಾಖಲೆ ತಪ್ಪಿಸಿಕೊಂಡ ಸ್ಮಿತ್
ಆಸ್ಟ್ರೇಲಿಯಾದ(AUS vs IND) ಸ್ಟಾರ್ ಬ್ಯಾಟರ್ ಸ್ಟೀವನ್ ಸ್ಮಿತ್(Steve Smith) ಒಂದು ರನ್ ಅಂತರದಿಂದ ಟೆಸ್ಟ್‌ನಲ್ಲಿ 10,000 ರನ್‌ಗಳನ್ನು ತಲುಪುವ ಅವಕಾಶವನ್ನು ಕಳೆದುಕೊಂಡರು. ಸ್ಮಿತ್ 9,999 ರನ್ ಗಳಿಸಿದ್ದ ವೇಳೆ ಔಟ್ ಆಗುವ ಮೂಲಕ ನಿರಾಸೆ ಕಂಡರು. ಒಂದೊಮ್ಮೆ ಅವರು 10 ಸಾವಿರ ರನ್ ಪೂರ್ತಿಗೊಳಿಸುತ್ತಿದ್ದರೆ ಈ ಸಾಧನೆಗೈದ ಆಸ್ಟ್ರೇಯಾದ 4ನೇ ಬ್ಯಾಟರ್ ಎನಿಸಿಕೊಳ್ಳುತ್ತಿದ್ದರು.
10 ಸಾವಿರ ರನ್ ಪೂರೈಸಲು ಸ್ಮಿತ್‌ಗೆ 5 ರನ್ ಬೇಕಿತ್ತು. ಆದರೆ 4 ರನ್ ಗಳಿಸಿದ್ದ ವೇಳೆ ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಸ್ಲಿಪ್‌ನಲ್ಲಿ ನಿಂತಿದ್ದ ಜೈಸ್ವಾಲ್‌ಗೆ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಸ್ಮಿತ್ 10 ಸಾವಿರ ಮೈಲುಗಲ್ಲು ತಲುಪಲು ಮುಂಬರುವ ಶ್ರೀಲಂಕಾ ಸರಣಿ ತನಕ ಕಾಯಬೇಕು. ಲಂಕಾ ಸರಣಿಯಲ್ಲಿ ಒಂದು ರನ್ ಗಳಿಸುತ್ತಿದ್ದಂತೆ ಅವರು 10 ಸಾವಿರ ಟೆಸ್ಟ್ ರನ್‌ಗಳ ಎಲೈಟ್ ಪಟ್ಟಿ ಸೇರಲಿದ್ದಾರೆ.