ಸಿಡ್ನಿ: ಆಸ್ಟ್ರೇಲಿಯಾ(AUS vs IND) ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತ ಬಿಗಿ ಹಿಡಿತ ಸಾಧಿಸುವ ಸೂಚನೆ ನೀಡಿದೆ. ಕಮಿನ್ಸ್ ಪಡೆಯನ್ನು 181 ರನ್‌ಗೆ ಆಲೌಟ್ ಮಾಡಿ ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ರನ್‌ಗಳ ಮುನ್ನಡೆ ಸಾಧಿಸಿದೆ. 9 ರನ್ ಗಳಿಸಿದ್ದಲ್ಲಿಂದ ಶನಿವಾರ ದ್ವಿತೀಯ ದಿನದಾಟ ಆರಂಭಿಸಿದ ಆಸೀಸ್‌ಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ಘಾತಕ ಬೌಲಿಂಗ್ ದಾಳಿ ಮೂಲಕ ಆಘಾತವಿಕ್ಕಿದರು. ಉಭಯ ಆಟಗಾರರ ಬೌಲಿಂಗ್ ದಾಳಿಯ ಮುಂದೆ ಆಸೀಸ್ ಬ್ಯಾಟರ್‌ಗಳು ತರಗೆಲೆಯಂತೆ ಉದುರಿ ಪೆವಿಲಿಯನ್ ಸೇರಿದರು.
ಮೊದಲ ದಿನದಾಟದಲ್ಲಿ ಜಸ್‌ಪ್ರೀತ್ ಬುಮ್ರಾ ಅವರನ್ನು ಕೆಣಕಿದ್ದ ಸ್ಯಾಮ್ ಕಾನ್ಸ್ಟಾಸ್ 23 ರನ್ ಗಳಿಸಿ ಮೊಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಅಪಾಯಕಾರಿ ಹೆಡ್ 4 ರನ್‌ಗೆ ಆಟ ಮುಗಿಸಿದರು. ಸ್ಟೀವನ್ ಸ್ಮಿತ್ 33, ಅಲೆಕ್ಸ್ ಕ್ಯಾರಿ 21 ರನ್ ಗಳಿಸಿದರು. ಉಭಯ ಆಟಗಾರರ ವಿಕೆಟ್ ಪ್ರಸಿದ್ಧ್ ಕೃಷ್ಣ ಪಾಲಾಯಿತು.
ಆಸ್ಟ್ರೇಲಿಯಾಕ್ಕೆ ಆಸರೆಯಾದದ್ದು ಪದಾರ್ಪಣ ಪಂದ್ಯವನ್ನಾಡಿದ ಬ್ಯೂ ವೆಬ್‌ಸ್ಟರ್. 6ನೇ ಕ್ರಮಾಂಕದಲ್ಲಿ ಆಡಲಿಳಿದ ಅವರು ಅರ್ಧಶತಕ ಬಾರಿಸಿ ಮಿಂಚಿದರು. 105 ಎಸೆತ ಎದುರಿಸಿ 5 ಬೌಂಡರಿ ನೆರವಿನಿಂದ 57 ರನ್ ಬಾರಿಸಿದರು. ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ ತಲಾ 3 ವಿಕೆಟ್ ಕಿತ್ತರೆ, ಜಸ್‌ಪ್ರೀತ್ ಬುಮ್ರಾ ಮತ್ತು ನಿತೀಶ್ ರೆಡ್ಡಿ ತಲಾ 2 ವಿಕೆಟ್ ಪಡೆದರು.
ದ್ವಿತೀಯ ದಿನದಾಟದಲ್ಲಿ ಬುಮ್ರಾ ಅವರು ದಿನದ ಎರಡನೇ ಓವರ್‌ನಲ್ಲಿ ಮಾರ್ನಸ್ ಲಬುಶೇನ್ ವಿಕೆಟ್ ಕೀಳುವ ಮೂಲಕ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಭಾರತದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ವೇಳೆ ಅವರು ಭಾರತ ತಂಡದ ಮಾಜಿ ನಾಯಕ, ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಅವರ ದಾಖಲೆ ಹಿಂದಿಕ್ಕಿದರು. ಬಿಷನ್ ಸಿಂಗ್ ಬೇಡಿ ಅವರು 1977/78 ರ ಸರಣಿಯ ವೇಳೆ 31 ವಿಕೆಟ್ ಕಿತ್ತಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಇದೀಗ ಬುಮ್ರಾ 32 ವಿಕೆಟ್ ಕಿತ್ತು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.