ಸಿಡ್ನಿ: ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಗ್ರ ಕ್ರಮಾಂಕದ ಬ್ಯಾಟಿಂಗ್ ಕುಸಿತಕ್ಕೆ ಸಿಲುಕಿದ ಹೊರತಾಗಿಯೂ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತ(AUS vs IND) ತನ್ನ ಹೋರಾಟವನ್ನು ಜಾರಿಯಲ್ಲಿರಿಸಿದೆ. ದ್ವಿತೀಯ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 141 ರನ್ ಬಾರಿಸಿ, ಒಟ್ಟಾರೆ 145 ರನ್ನುಗಳ ಮುನ್ನಡೆಯಲ್ಲಿದೆ. ರವೀಂದ್ರ ಜಡೇಜಾ(8) ಮತ್ತು ವಾಷಿಂಗ್ಟನ್ ಸುಂದರ್(6) ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಭಾರತ ಈ ಪಂದ್ಯವನ್ನು ಉಳಿಸಿ ಕೊಳ್ಳಬೇಕಾದರೆ ಮೂರನೇ ದಿನದಾಟದಲ್ಲಿ ಸಂಪೂರ್ಣವಾಗಿ ಬ್ಯಾಟಿಂಗ್ ನಡೆಸಿ ಕನಿಷ್ಠ 250 ರನ್‌ಗಳ ಲೀಡ್ ಪಡೆಯಬೇಕು.
ಒಂದು ವಿಕೆಟ್ ನಷ್ಟಕ್ಕೆ 9 ರನ್ ಗಳಿಸಿದ್ದಲ್ಲಿಂದ ಎರಡನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾಕ್ಕೆ ಆರಂಭದಲ್ಲಿ ಜಸ್‌ಪ್ರೀತ್ ಬುಮ್ರಾ ಅವರು ಮಾರ್ನಸ್ ಲಬುಶೇನ್(2) ವಿಕೆಟ್ ಕಿತ್ತು ಆಘಾತವಿಕ್ಕಿದರು. ಆ ಬಳಿಕ ಕನ್ನಡಿಗ ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ ಮತ್ತು ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಜಿದ್ದಿಗೆ ಬಿದ್ದವರಂತೆ ಬೌಲಿಂಗ್ ದಾಳಿ ನಡೆಸಿ ಆಸೀಸ್ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾದರು. ಆಸೀಸ್ 181 ರನ್‌ಗೆ ಆಲೌಟ್ ಆಯಿತು. ಅಪಾಯಕಾರಿ ಸ್ಮಿತ್(33) ವಿಕೆಟ್ ಪ್ರಸಿದ್ಧ್ ಪಾಲಾದರೆ, ಟ್ರಾವಿಸ್ ಹೆಡ್(4) ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು.
96 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಆಸೀಸ್‌ಗೆ ನೆರವಾದದ್ದು ಪದಾರ್ಪಣ ಪಂದ್ಯವನ್ನಾಡಿದ ವೆಬ್‌ಸ್ಟರ್. ಭಾರತೀಯ ಬೌಲರ್‌ಗಳ ದಾಳಿಗೆ ಕೆಲ ಕಾಲ ತಡೆಯೊಡ್ಡಿ ನಿಂತ ಅವರು 57 ರನ್ ಗಳಿಸಿ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ ಸಾಧನೆ ಮಾಡಿದರು. ಟ್ರಾವಿಸ್ ಹೆಡ್ 21 ರನ್ ಬಾರಿಸಿದರು. ಭಾರತ ಪರ ಸಿರಾಜ್(51 ಕ್ಕೆ 3), ಪ್ರಸಿದ್ಧ್ ಕೃಷ್ಣ(42 ಕ್ಕೆ 3), ನಿತೀಶ್ ರೆಡ್ಡಿ(33ಕ್ಕೆ 2), ಬುಮ್ರಾ (33 ಕ್ಕೆ 2) ವಿಕೆಟ್ ಕಿತ್ತರು.
ಪಂತ್ ಬಿರುಸಿನ ಬ್ಯಾಟಿಂಗ್
4 ರನ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ಆರಂಭಿಕ ಹಂತದಲ್ಲಿ ಉತ್ತಮವಾಗಿಯೇ ಬ್ಯಾಟಿಂಗ್ ನಡೆಸಿತು. ಸ್ಟಾರ್ಕ್ ಎಸೆದ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಯಶಸ್ವಿ ಜೈಸ್ವಾಲ್ ಹ್ಯಾಟ್ರಿಕ್ ಸಹಿತ 4 ಬೌಂಡರಿ ಬಾರಿಸಿ ಒಂದೇ ಓವರ್‌ನಲ್ಲಿ 16 ರನ್ ಕಸಿದರು. ರಾಹುಲ್ ಕೂಡ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಬೋಲ್ಯಾಂಡ್ ಬೇರ್ಪಡಿಸಿದರು. 13 ರನ್ ಗಳಿಸಿದ್ದ ರಾಹುಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಬೆನಲ್ಲೇ ಮುಂದಿನ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನೂ ಬೌಲ್ಡ್ ಮಾಡಿದರು. ಈ ಮೂಲಕ ಭಾರತಕ್ಕೆ ಅವಳಿ ಆಘಾತವಿಕ್ಕಿದರು. ಜೈಸ್ವಾಲ್ ಆಟ 22 ರನ್‌ಗೆ ಕೊನೆಗೊಂಡಿತು.
ಆರಂಭಿಕರಿಬ್ಬರ ವಿಕೆಟ್ ಪತನಗೊಂಡದ್ದೇ ತಡ ಆ ಬಳಿಕ ಭಾರತದ ಬ್ಯಾಟಿಂಗ್ ನಾಟಕೀಯ ಕುಸಿಯ ಕಂಡಿತು. ಶುಭಮನ್ ಗಿಲ್(13) ವಿರಾಟ್ ಕೊಹ್ಲಿ(6), ನಿತೀಶ್ ರೆಡ್ಡಿ(4) ಮತ್ತೊಮ್ಮೆ ನಿರಾಸೆ ಮೂಡಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಆಸೀಸ್ ಬೌಲರ್‌ಗಳನ್ನು ದಂಡಿಸಿದ ರಿಷಭ್ ಪಂತ್ ಕೇವಲ 29 ಎಸೆತಗಳಿಂದ ಅರ್ಧಶತಕ ಬಾರಿಸಿದರು. 33 ಎಸೆತ ಎದುರಿಸಿದ ಅವರು ಅಂತಿಮವಾಗಿ ಸೊಗಸಾದ 4 ಸಿಕ್ಸರ್ ಮತ್ತು 6 ಬೌಂಡರಿ ನೆರವಿನಿಂದ 61 ರನ್ ಗಳಿಸಿದರು.
ಬಿರುಸಿನ ಅರ್ಧಶತಕ ಬಾರಿಸಿದ ಪಂತ್ 50 ವರ್ಷದ ಬಳಿಕ ಆಸ್ಟ್ರೇಲಿಯಾದಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಇಂಡೀಸ್‌ನ ಮಾಜಿ ಆಟಗಾರ ರಾಯ್ ಫ್ರೆಡೆರಿಕ್ಸ್ ಹೆಸರಿನಲ್ಲಿತ್ತು. ಅವರು 1975ರಲ್ಲಿ ಪರ್ತ್‌ನಲ್ಲಿ33 ಎಸೆತಗಳಿಂದ ಅರ್ಧಶತಕ ಬಾರಿಸಿದ್ದರು. ಸದ್ಯ ಆಸ್ಟ್ರೇಲಿಯಾ ಪರ ಸ್ಕಾಟ್ ಬೋಲ್ಯಾಂಡ್ 42 ರನ್‌ಗೆ 4 ವಿಕೆಟ್ ಕಿತ್ತಿದ್ದಾರೆ.
ಆಸ್ಪತ್ರೆ ಸೇರಿದ ಬುಮ್ರಾ
ಹಂಗಾಮಿ ನಾಯಕ ಜಸ್‌ಪ್ರೀತ್ ಬುಮ್ರಾ ದ್ವಿತೀಯ ದಿನದಾಟದ ವೇಳೆ ಬೆನ್ನು ನೋವಿನ ಸೆಳೆತಕ್ಕೆ ತುತ್ತಾಗಿ ಅರ್ಧದಲ್ಲೇ ಮೈದಾನ ತೊರೆದರು. 8 ಓವರ್ ಬೌಲಿಂಗ್ ದಾಳಿ ನಡೆಸಿದ ಬಳಿಕ ಬುಮ್ರಾ ಗಾಯಕ್ಕೆ ತುತ್ತಾದರು. ಬುಮ್ರಾ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದರು. ಬುಮ್ರಾ ಗಾಯ ಟೀಮ್ ಇಂಡಿಯಾಗೆ ಆತಂಕ ತಂದಿದ್ದು ಮೂರನೇ ದಿನದಾಟದಲ್ಲಿ ಅವರು ಆಡುವ ಕುರಿತು ಸದ್ಯ ಯಾವುದೇ ನಿಶ್ಚಿತತೆ ಇಲ್ಲ.