Friday, 20th December 2024

AUS vs IND: ಅಂತಿಮ 2 ಟೆಸ್ಟ್‌ಗೆ ಆಸೀಸ್‌ ತಂಡ ಪ್ರಕಟ; 19 ವರ್ಷದ ಬ್ಯಾಟರ್‌ಗೆ ಅವಕಾಶ

ಸಿಡ್ನಿ: ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ನಡೆಯಲಿರುವ ಭಾರತ ವಿರುದ್ಧದ 4 ಮತ್ತು 5 ನೇ ಟೆಸ್ಟ್‌ಗಾಗಿ ಕ್ರಿಕೆಟ್‌ ಆಸ್ಟ್ರೇಲಿಯಾ(AUS vs IND) ತಂಡವನ್ನು ಪ್ರಕಟಿಸಿದೆ. ಹಲವು ಅಚ್ಚರಿಯ ಬದಲಾವಣೆಗಳನ್ನು ಮಾಡಿದೆ. ಪಿಂಕ್-ಬಾಲ್ ಟೆಸ್ಟ್‌ಗೆ ಮೊದಲು ಕ್ಯಾನ್‌ಬೆರಾದಲ್ಲಿ ಟೀಮ್ ಇಂಡಿಯಾ ವಿರುದ್ಧದ ಪ್ರೈಮ್ ಮಿನಿಸ್ಟರ್ಸ್ XI ಅಭ್ಯಾಸ ಪಂದ್ಯದಲ್ಲಿ ಶತಕ ಬಾರಿಸಿದ್ದ 19 ವರ್ಷದ ಸ್ಯಾಮ್‌ ಕೋನ್‌ಸ್ಟಾಸ್‌ ಅವರನ್ನು ಆಯ್ಕೆ ಮಾಡಲಾಗಿದೆ. ಅಂದಿನ ಪಂದ್ಯದಲ್ಲಿ ಸ್ಯಾಮ್‌ ಕೋನ್‌ಸ್ಟಾಸ್‌ 107 ರನ್‌ ಬಾರಿಸಿದ್ದರು.

ಡೇವಿಡ್ ವಾರ್ನರ್‌ ನಿವೃತ್ತಿಯ ಕಾರಣ ಅವರ ಸ್ಥಾನಕ್ಕೆ ಆಯ್ಕೆಯಾಗಿದ್ದ ನಾಥನ್ ಮೆಕ್‌ಸ್ವೀನಿ ಅವರನ್ನು ಉಳಿದ 2 ಟೆಸ್ಟ್‌ ಪಂದ್ಯಗಳಿಂದ ಕೈಬಿಡಲಾಗಿದೆ. ಅವರು ಆಡಿದ ಮೂರು ಟೆಸ್ಟ್‌ನಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದರು. ಇದೀಗ ಸ್ಯಾಮ್ ಕೊನ್‌ಸ್ಟಾಸ್ ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಉಸ್ಮಾನ್‌ ಖವಾಜ ಜತೆ ಇನಿಂಗ್ಸ್‌ ಆರಂಭಿಸಲು ಸಜ್ಜಾಗಿದ್ದಾರೆ. ಇದು ಅವರ ಪಾಲಿಗೆ ಚೊಚ್ಚಲ ಪಂದ್ಯವಾಗಲಿದೆ. ಸೀನ್ ಅಬಾಟ್, ಜೇ ರಿಚರ್ಡ್‌ಸನ್ ಮತ್ತು ಬ್ಯೂ ವೆಬ್‌ಸ್ಟರ್ ಕೂಡ ತಂಡ ಸೇರಿಸಿದ್ದಾರೆ.

ಡಿಸೆಂಬರ್ 2024 ರಲ್ಲಿ, ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಥಂಡರ್‌ ಪರ ಸ್ಯಾಮ್‌ ಕೋನ್‌ಸ್ಟಾಸ್‌ ಪಾದರ್ಪಣೆ ಮಾಡಿದ್ದರು. ಡೇವಿಡ್ ವಾರ್ನರ್ ಜತೆಗೆ ಆರಂಭಿಕರಾಗಿ ಆಡಿದ್ದ ಅವರು, 26 ಎಸೆತಗಳಲ್ಲಿ 57 ರನ್ ಬಾರಿಸಿ ಗಮನಸೆಳೆದಿದ್ದರು. ಈ ಮೂಲಕ ಸಿಡ್ನಿ ಥಂಡರ್ ತಂಡದ ಪರ ಅತ್ಯಂತ ವೇಗದ ಅರ್ಧಶತಕವನ್ನು ಬಾರಿಸಿದ ದಾಖಲೆ ಬರೆದಿದ್ದರು. ಭಾರತ ಎ ವಿರುದ್ಧದ ಅನಧಿಕೃತ ಟೆಸ್ಟ್‌ನ ದ್ವಿತೀಯ ಪಂದ್ಯದಲ್ಲಿ 73  ರನ್‌ ಗಳಿಸಿದ್ದರು. ಇದೀಗ ಆಸೀಸ್‌ ತಂಡದಲ್ಲಿ ಅವಕಾಶ ಪಡೆದ ಕೋನ್‌ಸ್ಟಾಸ್‌ ಅಂತಿಮ ಎರಡು ಟೆಸ್ಟ್‌ನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದರೆ ಆಸೀಸ್‌ ತಂಡದ ಭವಿಷ್ಯದ ಆಟಗಾರನಾಗಿ ಬೆಳೆಯಲಿದ್ದಾರೆ.

ಆಸ್ಟ್ರೇಲಿಯಾ ತಂಡ

ಪ್ಯಾಟ್ ಕಮ್ಮಿನ್ಸ್ (ಸಿ), ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್‌, ಸ್ಯಾಮ್‌ ಕೋನ್‌ಸ್ಟಾಸ್‌, ಉಸ್ಮಾನ್ ಖವಾಜಾ, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಬ್ಯೂ ವೆಬ್ಸ್ಟರ್, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೇ ರಿಚರ್ಡ್ಸನ್, ಅಲೆಕ್ಸ್ ಕ್ಯಾರಿ, ಸ್ಕಾಟ್ ಬೋಲ್ಯಾಂಡ್ ಮತ್ತು ಜೋಶ್ ಇಂಗ್ಲಿಸ್.