Monday, 23rd December 2024

AUS vs IND: ಪ್ರಾಕ್ಟೀಸ್‌ ಪಿಚ್‌ ಬಗ್ಗೆ ಭಾರತ ತಂಡ ಅತೃಪ್ತಿ

ಮೆಲ್ಬೋರ್ನ್‌: ಡಿ.26ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ(AUS vs IND) ವಿರುದ್ಧದ 4ನೇ ಟೆಸ್ಟ್‌ ಪಂದ್ಯಕ್ಕೆ ಸಜ್ಜಾಗುತ್ತಿರುವ ಭಾರತ ತಂಡ ಅಭ್ಯಾಸಕ್ಕೆ ಒದಗಿಸಿರುವ ಪಿಚ್‌ ಬಗ್ಗೆ ಅತೃಪ್ತಿ ಹೊರಹಾಕಿದೆ. ಮೆಲ್ಬೋರ್ನ್‌ ಕ್ರೀಡಾಂಗಣದ ಪಿಚ್‌(Melbourne Cricket Ground) ಹೆಚ್ಚಿನ ಬೌನ್ಸ್‌ನಿಂದ ಕೂಡಿದ್ದರೂ ಅಭ್ಯಾಸದ ಪಿಚ್‌ನಲ್ಲಿ ಬೌನ್ಸ್‌ ಕಂಡುಬರುತ್ತಿಲ್ಲ ಚೆಂಡು ಸಾಧಾರಣ ಎತ್ತರಕ್ಕೆ ಬೌನ್ಸ್‌ ಆಗುತ್ತಿದೆ. ಇದರಿಂದ ಅಭ್ಯಾಸಕ್ಕೆ ತೊಂದರೆ ಉಂಟಾಗಿದೆ. ಮತ್ತು ಆಟಗಾರರ ಗಾಯಕ್ಕೂ ಇದೇ ಕಾರಣ ಎಂದು ಭಾರತ ತಂಡ ಆರೋಪಿಸಿರುವುದಾಗಿ ವರದಿಯಾಗಿದೆ.

ಶನಿವಾರದಂದು ಅಭ್ಯಾಸದ ವೇಳೆ ಕೆ.ಎಲ್‌. ರಾಹುಲ್‌ ಅವರ ಕೈ ಬೆರಳಿಗೆ ಏಟು ಬಿದ್ದ ಘಟನೆ ಸಂಭವಿಸಿತ್ತು. ಕೂಡಲೇ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಗಂಭೀರ ಸ್ವರೂಪದ ಗಾಯದಿಂದ ರಾಹುಲ್‌ ಪಾರಾಗಿದ್ದರು. ಇದರ ಬೆನ್ನಲ್ಲೇ ಭಾನುವಾರ ನಾಯಕ ರೋಹಿತ್‌ ಶರ್ಮ ಮತ್ತು ವೇಗಿ ಆಕಾಶ್‌ದೀಪ್‌ ಕೂಡ ಗಾಯಗೊಂಡಿದ್ದರು. ರೋಹಿತ್ ಮೊಣಕಾಲಿಗೆ ಪೆಟ್ಟು ಬಿದ್ದಿತ್ತು.

ಎಂಸಿಜಿನಲ್ಲಿ ಭಾರತದ ದಾಖಲೆ

ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಭಾರತ ತಂಡ ಇಲ್ಲಿಯವರೆಗೂ ಆಡಿದ 14 ಟೆಸ್ಟ್‌ ಪಂದ್ಯಗಳಿಂದ ಕೇವಲ 4ರಲ್ಲಿ ಗೆದ್ದಿದ್ದು, ಎಂಟು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇನ್ನುಳಿದ ಎರಡು ಪಂದ್ಯಗಳು ಡ್ರಾನಲ್ಲಿ ಅಂತ್ಯ ಕಂಡಿವೆ. 1948ರಲ್ಲಿ ಮೊಟ್ಟ ಮೊದಲ ಬಾರಿ ಭಾರತ ತಂಡ ಎಂಸಿಜಿನಲ್ಲಿ ಟೆಸ್ಟ್‌ ಆಡಿತ್ತು. ಈ ವೇಳೆ ಡೊನಾಲ್ಡ್‌ ಬ್ರಾಡ್‌ಮನ್‌ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದರು. ಈ ಪಂದ್ಯದಲ್ಲಿ ಲಾಲ್‌ ಅಮರನಾಥ್‌ ಅವರ ನಾಯಕತ್ವದ ಭಾರತ 233 ರನ್‌ಗಳಿಂದ ಸೋಲು ಅನುಭವಿಸಿತ್ತು. 2014ರ ಬಳಿಕ ಭಾರತ ಎಂಸಿಜಿಯಲ್ಲಿ ಸೋತಿಲ್ಲ. ಒಂದರಲ್ಲಿ ಡ್ರಾ ಹಾಗೂ ಎರಡು ಪಂದ್ಯಗಳಲ್ಲಿ ಜಯಿಸಿದೆ.

ಇದನ್ನೂ ಓದಿ R Ashwin: ಕ್ಯಾರಂ ಬಾಲ್​ ಎಸೆದು ಅಚ್ಚರಿ ಮೂಡಿಸಿದ್ದೀರಿ; ಅಶ್ವಿನ್​ಗೆ ಪ್ರಧಾನಿ ಮೋದಿ ಪತ್ರ

ಗೆಲುವಿನ ಒತ್ತಡದಲ್ಲಿ ಭಾರತ

ಬ್ರಿಸ್ಬೇನ್ ಟೆಸ್ಟ್‌ ಪಂದ್ಯ ಡ್ರಾಗೊಂಡಿರುವ ಕಾರಣ ಭಾರತದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ ಕಠಿಣಗೊಂಡಿದೆ. ಫೈನಲ್‌ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಬೇಕಾದರೆ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ‌ಉಳಿದೆರಡು ಪಂದ್ಯಗಳನ್ನು ಗೆಲ್ಲಬೇಕು. ಆಗ ಗೆಲುವಿನ ಶೇಕಡಾ ವಾರನ್ನು 60.52ಕ್ಕೆ ಏರಿಸಲು ಅವಕಾಶವಿದೆ. ಒಂದು ಪಂದ್ಯ ಸೋತರೂ ಭಾರತ ಫೈನಲ್‌ ರೇಸ್‌ನಿಂದ ಬಹುತೇಕ ಹೊರಬೀಳಲಿದೆ. ಒಂದು ವೇಳೆ ಭಾರತ 2 ಪಂದ್ಯದಲ್ಲಿ 1 ಪಂದ್ಯ ಸೋತು ಅಥವಾ ಡ್ರಾಗೊಳಿಸಿಕೊಂಡರೆ, ಆಗ ಆಸೀಸ್‌ -ಲಂಕಾ ನಡುವಿನ 2 ಪಂದ್ಯಗಳ ಸರಣಿಯ ಫ‌ಲಿತಾಂಶವನ್ನು ಭಾರತ ಅವಲಂಬಿಸಬೇಕಾಗುತ್ತದೆ. ಸದ್ಯ ಭಾರತದ ಗೆಲುವಿನ ಶೇಕಡವಾರು ಅಂಕ 55.88 ರಷ್ಟಿದೆ.