ಸಿಡ್ನಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತನ್ನ ಹಿಡಿತವನ್ನು ಬಿಗುಗೊಳಿಸಿದೆ.
94 ರನ್‌ಗಳ ಮಹತ್ವದ ಇನ್ನಿಂಗ್ಸ್ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಮುಂದುವರಿಸಿರುವ ಆಸ್ಟ್ರೇಲಿಯಾ, ಮೂರನೇ ದಿನದಂತ್ಯಕ್ಕೆ 29 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿದೆ.
ಇದರೊಂದಿಗೆ ಒಟ್ಟು ಮುನ್ನಡೆಯನ್ನು 197 ರನ್‌ಗಳಿಗೆ ಏರಿಸಿದೆ. ಅಲ್ಲದೆ ಇನ್ನೆರಡು ದಿನಗಳ ಆಟ ಬಾಕಿ ಉಳಿದಿರುವಂತೆಯೇ ಗೆಲುವಿನತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಕಳಪೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಜೊತೆಗೆ ಗಾಯದ ಸಮಸ್ಯೆಗೆ ಸಿಲುಕಿರುವ ಅಜಿಂಕ್ಯ ರಹಾನೆ ಪಡೆ ಸಂಕಷ್ಟಕ್ಕೊಳಗಾಗಿದೆ. ಗಾಯದಿಂದಾಗಿ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜ ಸೇವೆಯಿಂದ ಭಾರತ ವಂಚಿತ ವಾಗಿದ್ದು, ಸ್ಕ್ಯಾನಿಂಗ್ ವರದಿ ಇನ್ನಷ್ಟೇ ಬರಬೇಕಿದೆ.
ದ್ವಿತೀಯ ಇನ್ನಿಂಗ್ಸ್‌ನಲ್ಲೂ ಆಸೀಸ್‌ಗೆ ಆರಂಭಿಕ ಆಘಾತ ನೀಡುವಲ್ಲಿ ಭಾರತ ಯಶಸ್ವಿಯಾಗಿತ್ತು. ಅಲ್ಲದೆ 35 ರನ್ ಪೇರಿಸು ವಷ್ಟರಲ್ಲಿ ಪದಾರ್ಪಣಾ ಪಂದ್ಯದ ಅರ್ಧಶತಕ ವೀರ ವಿಲ್ ಪುಕೊವಸ್ಕಿ (10) ಸೇರಿದಂತೆ ಅಪಾಯಕಾರಿ ಡೇವಿಡ್ ವಾರ್ನರ್ (13) ಅವರನ್ನು ಹೊರದಬ್ಬುವಲ್ಲಿ ಯಶಸ್ವಿಯಾಗಿತ್ತು. ಈ ವಿಕೆಟ್‌ಗಳನ್ನು ಮೊಹಮ್ಮದ್ ಸಿರಾಜ್ ಹಾಗೂ ಆರ್. ಅಶ್ವಿನ್ ಹಂಚಿ ಕೊಂಡರು.
ಇನ್ ಫಾರ್ಮ್ ಬ್ಯಾಟ್ಸ್‌ಮನ್‌ಗಳಾದ ಮಾರ್ನಸ್ ಲಾಬುಷೇನ್ ಹಾಗೂ ಸ್ಟೀವನ್ ಸ್ಮಿತ್ ಮುರಿಯದ ಎರಡನೇ ವಿಕೆಟ್‌ಗೆ 68 ರನ್‌ಗಳ ಜೊತೆಯಾಟ ನೀಡಿ ಎದುರಾಳಿಗಳನ್ನು ಕಾಡಿದರು.
ದಿನದಂತ್ಯಕ್ಕೆ ಆಸೀಸ್ ಎರಡು ವಿಕೆಟ್ ನಷ್ಟಕ್ಕೆ 103 ರನ್ ಪೇರಿಸಿದೆ. ಲಾಬುಷೇನ್ 47 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿ ದ್ದಾರೆ. ಸ್ಟೀವನ್ ಸ್ಮಿತ್ 63 ಎಸೆತಗಳಲ್ಲಿ ಮೂರು ಬೌಂಡರಿಗಳಿಂದ 29 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ.
ಈ ಮೊದಲು ಆಸೀಸ್ ವೇಗದ ದಾಳಿಗೆ ಕುಸಿತ ಅನುಭವಿಸಿದ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಹೋರಾಟ ಮನೋಭಾವ ತೋರಲಿಲ್ಲ. ಅಲ್ಲದೆ 244 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಎದುರಾಳಿಗೆ 94 ರನ್‌ಗಳ ಮಹತ್ವದ ಮುನ್ನಡೆ ಬಿಟ್ಟು ಕೊಟ್ಟಿತ್ತು.
ಭಾರತಕ್ಕೆ ಕಲಾತ್ಮಕ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಆಸರೆ ಯಾದರು. ಅತ್ತ ನಾಯಕ ಅಜಿಂಕ್ಯ ರಹಾನೆ (22) ಹೆಚ್ಚು ಹೊತ್ತು ನಿಲ್ಲನಿಲ್ಲ. ಪ್ಯಾಟ್ ಕಮಿನ್ಸ್ ದಾಳಿಯಲ್ಲಿ ಕ್ಲೀನ್ ಬೌಲ್ಡ್ ಆದರು. ಹನುಮ ವಿಹಾರಿ (4) ರನೌಟ್ ಆಗುವುದರೊಂದಿಗೆ ಭಾರತಕ್ಕೆ ಮಗದೊಂದು ಹೊಡೆತ ಬಿತ್ತು.
ಈ ಹಂತದಲ್ಲಿ ಜೊತೆಗೂಡಿದ ಪೂಜಾರ ಹಾಗೂ ರಿಷಭ್ ಪಂತ್ 53 ರನ್‌ಗಳ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು.