Thursday, 19th September 2024

ಭಾರತದ ವಿರುದ್ಧ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ

ಬ್ಯಾಟಿಂಗ್ ಆಲ್​ರೌಂಡರ್ ಕ್ಯಾಮರಾನ್​ ಗ್ರೀನ್‌ಗೆ ಚೊಚ್ಚಲ ಕರೆ

ಮೆಲ್ಬರ್ನ್: ಐಪಿಎಲ್​ ಬಳಿಕ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಭಾರತದ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ – 20 ಸರಣಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಬಲಿಷ್ಠ ತಂಡವನ್ನು ಪ್ರಕಟಿಸಲಾಗಿದೆ.

ನವೆಂಬರ್ 27 ರಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು, 18 ಆಟಗಾರರ ತಂಡವನ್ನು ಪ್ರಕಟಿಸಲಾಗಿದೆ. ಬ್ಯಾಟಿಂಗ್ ಆಲ್​ರೌಂಡರ್ ಕ್ಯಾಮರಾನ್​ ಗ್ರೀನ್‌ಗೆ ರಾಷ್ಟ್ರೀಯ ತಂಡಕ್ಕೆ ಚೊಚ್ಚಲ ಕರೆ ಬಂದಿದ್ದು, ಆರೋನ್ ಫಿಂಚ್ ಆಸೀಸ್ ತಂಡ ಮುನ್ನಡೆಸಲಿದ್ದಾರೆ.

ಸಿಡ್ನಿ ಮೈದಾನದಲ್ಲಿ (ನ.27, 29) ಮತ್ತು ಕ್ಯಾನ್ಬೆರಾದ ಮನುಕಾ ಓವಲ್ (ಡಿ. 2) ನಲ್ಲಿ ಒಟ್ಟು ಮೂರು ಏಕದಿನ ಪಂದ್ಯಗಳೊಂದಿಗೆ ಪ್ರವಾಸ ಪ್ರಾರಂಭವಾಗಲಿದೆ. ನಂತರ ಕ್ಯಾನ್‌ಬೆರಾ (ಡಿ.4) ಮತ್ತು ಎಸ್‌ಸಿಜಿ (ಡಿ.6, 8) ನಲ್ಲಿ ಮೂರು ಪಂದ್ಯಗಳ ಟಿ -20 ಸರಣಿ ನಡೆಯಲಿದೆ.

ಏಕದಿನ ಮತ್ತು ಟಿ – 20 ಸರಣಿಗೆ ಆಸ್ಟ್ರೇಲಿಯಾ ತಂಡ : ಆಯರೋನ್ ಫಿಂಚ್(ನಾಯಕ), ಸೀನ್ ಅಬ್ಬೋಟ್, ಆಸ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್(ಉಪನಾಯಕ), ಕ್ಯಾಮರೋನ್ ಗ್ರೀನ್, ಜೋಶ್ ಹೇಜಲ್‌ವುಡ್, ಮೊಯಿಸ್ ಹೆನ್ರಿಕೇಸ್, ಮಾರ್ನಸ್​ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇನಿಯಲ್ ಸ್ಯಾಮ್ಸ್, ಕೇನ್ ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್​, ಮಾರ್ಕಸ್ ಸ್ಟೋಯ್ನಿಸ್,ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಂ ಜಂಪಾ.