Wednesday, 6th November 2024

Babar Azam: ಪಾಕ್‌ ತಂಡದಿಂದ ಬಾಬರ್‌ಗೆ ಗೇಟ್‌ಪಾಸ್‌

ಮುಲ್ತಾನ್:‌ ಇಂಗ್ಲೆಂಡ್(England tour of Pakistan) ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಹಾಗೂ 47 ರನ್‌ಗಳ ಹೀನಾಯ ಸೋಲು ಕಂಡು ಭಾರೀ ಮುಖಭಂಗ ಎದುರಿಸಿದ್ದ ಪಾಕಿಸ್ತಾನ ದ್ವಿತೀಯ ಟೆಸ್ಟ್‌ ಪಂದ್ಯಕ್ಕೂ ಮುನ್ನ ತಂಡದಲ್ಲಿ ಮಹತ್ವದ ಬದಲಾವಣೆ ನಡೆಸಲು ಮುಂದಾಗಿದೆ. ಮಾಜಿ ನಾಯಕ ಬಾಬರ್ ಅಜಂ (Babar Azam) ಅವರನ್ನು ಈ ಪಂದ್ಯದಿಂದ ಕೈ ಬಿಡಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಇದಕ್ಕೆ ಕಾರಣ ಬಾಬರ್‌ ಅವರ ಕಳಪೆ ಬ್ಯಾಟಿಂಗ್‌ ಫಾರ್ಮ್‌.

ಬಾಬರ್ ಮುಲ್ತಾನ್‌ ಟೆಸ್ಟ್‌ನ ಎರಡೂ ಇನಿಂಗ್ಸ್‌ ಸೇರಿ ದಾಖಲಿಸಿದ್ದು ಕೇವಲ 35 ರನ್‌ ಮಾತ್ರ. ಬ್ಯಾಟಿಂಗ್‌ ಸ್ನೇಹಿ ಪಿಚ್‌ ಆಗಿದ್ದರೂ ಕೂಡ ಬಾಬರ್‌ ಇದರ ಲಾಭವೆತ್ತಲು ವಿಫಲರಾಗಿದ್ದರು. ತಂಡದ ಸೋಲಿನ ಬಳಿಕ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಕೂಡ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಪುನಾರಚನೆ ಮಾಡಿತ್ತು. ಮಾಜಿ ಅಂಪೈರ್‌ ಅಲೀಂ ದಾರ್, ಆಕಿಬ್ ಜಾವೇದ್, ಮತ್ತು ಅಜರ್ ಅಲಿ ಅವರನ್ನೊಳಗೊಂಡ ಆಯ್ಕೆ ಸಮಿತಿಯನ್ನು ಆಯ್ಕೆ ಮಾಡಲಾಗಿತ್ತು. ಈ ನೂತನ ಆಯ್ಕೆ ಸಮಿತಿ ಕಳಪೆ ಫಾರ್ಮ್‌ನಲ್ಲಿರುವ ಬಾಬರ್‌ ಅವರನ್ನು ದ್ವಿತೀಯ ಟೆಸ್ಟ್‌ನಿಂದ ಕೈಬಿಡಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಇಂಗ್ಲೆಂಡ್‌ ಮತ್ತು ಪಾಕ್‌ ನಡುವಣ ದ್ವಿತೀಯ ಟೆಸ್ಟ್‌ ಪಂದ್ಯ ಅಕ್ಟೋಬರ್‌ 15 ರಿಂದ ಆರಂಭಗೊಳ್ಳಲಿದೆ.

ಒಂದು ಕಾಲದಲ್ಲಿ ವಿರಾಟ್ ಕೊಹ್ಲಿಗೆ ಸರಿಸಮನಾದ ಆಟಗಾರ ಎಂದು ಕರೆಸಿಕೊಳ್ಳುತ್ತಿದ್ದ ಬಾಬರ್, ಇದೀಗ ಘೋರ ಬ್ಯಾಟಿಂಗ್‌ ವೈಫಲ್ಯದಿಂದ ಬಳಲುತ್ತಿದ್ದಾರೆ. ತಂಡದಿಂದಲೂ ಹೊರಬೀಳುವ ಆತಂಕದಲ್ಲಿದ್ದಾರೆ. ಕೇವಲ ಕೊಹ್ಲಿ ಜತೆಗೆ ಹೋಲಿಯನ್ನು ತಲೆಯಲ್ಲಿಟ್ಟುಕೊಂಡರೆ ಸಾಲದು ಆತನಂತೆ ಆಡಬೇಕು ಎಂದು ಬಾಬರ್‌ಗೆ ಮಾಜಿ ಆಟಗಾರರು ಖಡಕ್‌ ಆದ ಸಲಹೆ ನೀಡಿದ್ದಾರೆ.

ಇದನ್ನೂ ಓದಿ ಪಾಕಿಸ್ತಾನ ಕ್ರಿಕೆಟ್ ಟಿ20 ತಂಡಕ್ಕೆ ಬಾಬರ್ ಅಜಂ ನಾಯಕ

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿ ಆರಂಭಕ್ಕೂ ಮುನ್ನವೇ ಬಾಬರ್‌ ಅವರು ಸೀಮಿತ ಓವರ್‌ಗಳ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಕಳೆದ ವರ್ಷ(2023) ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಬಾಬರ್​ ಸಾರಥ್ಯದಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ತೋರಿತ್ತು. ಆಡಿದ 9 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ ಲೀಗ್​ ಹಂತದಲ್ಲೇ ಹೊರಬಿದ್ದಿತ್ತು. ಹೀಗಾಗಿ ಬಾಬರ್​ ವಿರುದ್ಧ ಪಾಕ್​ ತಂಡದ ಮಾಜಿ ಆಟಗಾರರು ಸೇರಿ ಅಂದಿನ ಪಿಬಿ ಅಧ್ಯಕ್ಷ ಭಾರೀ ಟೀಕೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಾಬರ್ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದರು. ಬಾಬರ್ ಕೆಳಗಿಳಿದ ಬಳಿಕ ಶಾನ್ ಮಸೂದ್ ಅವರನ್ನು ಟೆಸ್ಟ್ ನಾಯಕರನ್ನಾಗಿ ನೇಮಿಸಿದರೆ, ಶಾಹೀನ್ ಅಫ್ರಿದಿಗೆ ಟಿ20 ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಯಿತು. ಆದರೆ ಇವರ ನಾಯಕತ್ವದಲ್ಲಿ ಪಾಕಿಸ್ತಾನ ಹಿಂದೆಂದು ಕಾಣದ ವೈಫಲ್ಯ ಕಂಡಿತ್ತು. ಆಡಿದ ಹಲವು ಸರಣಿಗಳಲ್ಲಿ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಅಫ್ರೀದಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಬಾಬರ್‌ಗೆ ಮತ್ತೆ ನಾಯಕತ್ವ ನೀಡಲಾಗಿತ್ತು. ಆದರೆ ತಂಡದ ಭವಿಷ್ಯ ಮಾತ್ರ ಬದಲಾಗಲಿಲ್ಲ. ಹೀಗಾಗಿ ಬಾಬರ್‌ ವಿರುದ್ಧ ಮತ್ತೆ ಟೀಕೆ ಕೇಳಿ ಬರಲಾರಂಭಿಸಿತ್ತು. ಇದನ್ನು ಸಹಿಸಲಾಗದೆ ಬಾಬರ್‌ ಮತ್ತೆ ನಾಯಕತ್ವದಿಂದ ಕೆಳಗಿಳಿದರು.