ನವದೆಹಲಿ: ಡೋಪಿಂಗ್ ಪರೀಕ್ಷೆಗೆ ನಿರಾಕರಿಸಿದ್ದಕ್ಕೆ ಭಾರತ ಕುಸ್ತಿಪಟು ಬಜರಂಗ್ ಪೂನಿಯಾರನ್ನು(Bajrang Punia) ಬುಧವಾರ ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ(ನಾಡಾ) 4 ವರ್ಷ ನಿಷೇಧ ವಿಧಿಸಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಜರಂಗ್ ಇದು ಬಿಜೆಪಿಯ ಪಿತೂರಿ ಎಂದು ಆರೋಪಿಸಿದ್ದಾರೆ. ನಾನು ಬಿಜೆಪಿ ಸೇರಿದರೆ ಈ ತಕ್ಷಣ ನನ್ನ ನಿಷೇಧ ತೆರವಾಗಲಿದೆ ಎಂದು ಹೇಳಿದ್ದಾರೆ.
ಡೋಪ್ ಪರೀಕ್ಷೆಗೆ ನಾನು ನಿರಾಕರಿಸಿಲ್ಲ. ಮೂತ್ರದ ಮಾದರಿ ಪರೀಕ್ಷೆಗೆ ಅವಧಿ ಮುಗಿದ ಕಿಟ್ ನೀಡಿದ್ದನ್ನು ಪ್ರಶ್ನಿಸಿದ್ದೆ. ಕಳೆದ 10-12 ವರ್ಷದಿಂದ ಕುಸ್ತಿ ಸ್ಪರ್ಧೆಯಲ್ಲಿರುವ ನಾನು ಎಲ್ಲ ಟೂರ್ನಿ ವೇಳೆಯೂ ಪರೀಕ್ಷೆಗೆ ಮೂತ್ರದ ಮಾದರಿ ನೀಡಿದ್ದೇನೆ. ಇಲ್ಲಿ ನಾನು ಡೋಪಿಂಗ್ ಪರೀಕ್ಷೆಗೆ ನಿರಾಕರಿಸಿದೆ ಎನ್ನುವುದಲ್ಲ. ಬದಲಾಗಿ ಮಹಿಳಾ ಕುಸ್ತಿಪಟುಗಳ ಪರವಾಗಿ ಪ್ರತಿಭಟನೆ ನಡೆಸಿದ್ದು. ಇದೊಂದು ಬಿಜೆಪಿಯ ಪಿತೂರಿ ಎನ್ನುವುದು ಸ್ಪಷ್ಟವಾಗಿ ಜನರಿಗೆ ತಿಳಿದಿದೆ ಎಂದರು.
ʼನನ್ನ ವೃತ್ತಿಜೀವನವನ್ನು ಕೊನೆಗೊಳಿಸಲು ಬಿಜೆಪಿ ಸರ್ಕಾರ ಮತ್ತು ಕುಸ್ತಿ ಒಕ್ಕೂಟವು ಈ ತಂತ್ರವನ್ನು ಮಾಡಿದೆ. ಈ ನಿರ್ಧಾರವು ನ್ಯಾಯೋಚಿತವಲ್ಲ. ನನ್ನ ಮೇಲೆ ನಾಡಾ ಹೇರಿರುವ ನಿಷೇಧಕ್ಕೆ ಹೆದರುವುದಿಲ್ಲ. ನಮ್ಮ ಹೋರಾಟವನ್ನು ನಾವು ಮುಂದುವರೆಸುತ್ತೇವೆ. ನನ್ನ ಕೊನೆಯ ಉಸಿರು ಇರುವವರೆಗೂ ನನ್ನ ಹೋರಾಟ ನಿರಂತರʼ ಎಂದು ಬಜರಂಗ್ ತಿಳಿಸಿದ್ದಾರೆ.
ಮಾರ್ಚ್ನಲ್ಲಿ ರಾಷ್ಟ್ರೀಯ ತಂಡದ ಆಯ್ಕೆ ಟ್ರಯಲ್ಸ್ ವೇಳೆ ಡೋಪ್ ಪರೀಕ್ಷೆಗೆ ಮೂತ್ರದ ಮಾದರಿ ನಿಲ್ಲ ಎಂಬ ಕಾರಣ ನೀಡಿ ಎಪ್ರೀಲ್ 23ರಂದು ನಾಡಾ ಬಜರಂಗ್ರನ್ನು ಅಮಾನತುಗೊಳಿಸಿತ್ತು. ಬಳಿಕ ಅವರ ಮೇಲೆ ಕುಸ್ತಿ ಜಾಗತಿಕ ಆಡಳಿತ ಸಂಸ್ಥೆಯೂ ನಿಷೇಧ ಹೇರಿತ್ತು. ಆದರೆ ನಾಡಾ ಜಜರಂಗ್ಗೆ ಅಮಾನತು ಆದೇಶ ನೋಟಿಸ್ ಜಾರಿಗೊಳಿಸದ ಕಾರಣಕ್ಕೆ ಡೋಪಿಂಗ್ ನಿಗ್ರಹ ಘಟಕದ ಶಿಸ್ತು ಸಮಿತಿಯು ಅಮಾನತ್ನು ಹಿಂಪಡೆದಿತ್ತು. ಬಳಿಕ ತಮ್ಮ ಮೇಲಿನ ನಿಷೇಧ ಹಿಂಪಡೆಯುವಂತೆ ಬಜರಂಗ್ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣ ಸಂಬಂಧ 2 ಬಾರಿ ವಾದ-ವಿವಾದ ಆಲಿಸಿದ ನಾಡಾ ಶಿಸ್ತು ಸಮಿತಿ ಅಂತಿಮವಾಗಿ ಅವರಿಗೆ ನಾಲ್ಕು ವರ್ಷದ ಶಿಕ್ಷೆ ಪ್ರಕಟಿಸಿದೆ.