Tuesday, 7th January 2025

BCCI Secretary: ಬಿಸಿಸಿಐ ಕಾಯದರ್ಶಿ ಹುದ್ದೆಗೆ ಸೈಕಿಯಾ ಅರ್ಜಿ

ನವದೆಹಲಿ: ಬಿಸಿಸಿಐ ಕಾರ್ಯದರ್ಶಿ(BCCI Secretary) ಸ್ಥಾನಕ್ಕೆ ಸದ್ಯ ಬಿಸಿಸಿಐ ಜಂಟಿ ಕಾರ್ಯದರ್ಶಿಯಾಗಿರುವ, ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ದೇವಜಿತ್‌ ಸೈಕಿಯಾ ಅರ್ಜಿ ಸಲ್ಲಿಸಿದ್ದಾರೆ. ಮೂಲಗಳ ಪ್ರಕಾರ ಸೈಕಿಯಾ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಸೈಕಿಯಾ ಕಾರ್ಯದರ್ಶಿಯಾದರೆ, ಖಾಲಿ ಉಳಿಯುವ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಬೇರೊಬ್ಬರನ್ನು ಆರಿಸಬೇಕಿದೆ. 56 ವರ್ಷದ ಸೈಕಿಯಾ, ಪ್ರಥಮ ದರ್ಜೆಯಲ್ಲಿ ಅಸ್ಸಾಂ ಪರ 4 ಪಂದ್ಯ ಆಡಿದ್ದಾರೆ.  ಜನವರಿ 12 ರಂದು ನಡೆಯಲಿರುವ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ(BCCI Meeting) ನೂತನ ಕಾರ್ಯದರ್ಶಿ ಮತ್ತು ಖಜಾಂಚಿಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

4200 ಕೋಟಿ ರೂ ಹೆಚ್ಚಳʼ-ಪ್ರಸಕ್ತ ವರ್ಷದಲ್ಲಿ ಬಿಸಿಸಿಐ ಗಳಿಸಿದ್ದು ಎಷ್ಟು ಕೋಟಿ ರೂ ಗೊತ್ತೆ?

ಕಳೆದ ವರ್ಷದಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (BCCI Profit) ಆದಾಯದಲ್ಲಿ ಭಾರೀ ಹೆಚ್ಚಳವಾಗಿತ್ತು. 4200 ಕೋಟಿ ರೂ. ಗಳು ಹೆಚ್ಚುವರಿಯಾಗಿ ಬಂದಿತ್ತು. ಒಟ್ಟಾರೆ 2024ರಲ್ಲಿ ಬಿಸಿಸಿಐಗೆ 20,686 ಕೋಟಿ ರೂ. ಗಳ ಆದಾಯ ಬಂದಿತ್ತು. ಇದರಲ್ಲಿ ವಿಶೇಷವಾಗಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಟೂರ್ನಿ ಹಾಗೂ ದ್ವಿಪಕ್ಷೀಯ ಸರಣಿಗಳ ಮಾಧ್ಯಮ ಪ್ರಸಾರದ ಹಕ್ಕುಗಳಿಂದ ಬಿಸಿಸಿಐಗೆ ಹೆಚ್ಚಿನ ಆದಾಯ ಸಂದಾಯವಾಗಿದೆ.

ಭಾರತವು ವಿಶ್ವದ ಅತಿದೊಡ್ಡ ಕ್ರಿಕೆಟ್ ಮಾರುಕಟ್ಟೆಯಾಗಿರುವುದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗಳಿಸುವ ಆದಾಯದಲ್ಲಿ ಬಿಸಿಸಿಐ ಸಿಂಹಪಾಲು ಪಡೆಯುತ್ತದೆ. 2022ರ ಜೂನ್‌ನಲ್ಲಿ ಐದು ವರ್ಷಗಳ ಅವಧಿಗೆ ಐಪಿಎಲ್ ಮಾಧ್ಯಮ ಹಕ್ಕುಗಳನ್ನು 48,390 ಕೋಟಿ ರೂ. ಗಳಿಗೆ ಮಾರಾಟ ಮಾಡಲಾಗಿತ್ತು.

“ಬಿಸಿಸಿಐನ ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್ 2023ರ ಫೈನಾನ್ಸ್‌ ವರ್ಷದಲ್ಲಿದ್ದ 16,493 ಕೋಟಿ ರೂ.ಗಳು, 2024ರ ಫೈನಾನ್ಸ್‌ ವರ್ಷಕ್ಕೆ 20,686 ಕೋಟಿ ರೂ.ಗಳಿಗೆ ಹೆಚ್ಚಾಗಿದೆ. ಅಂದರೆ ಸರಿ ಸುಮಾರು 4,200 ಕೋಟಿ ರೂ. ಗಳಷ್ಟು ಹೆಚ್ಚಳವಾಗಿದೆ,” ಎಂದು ಬಿಸಿಸಿಐ ದಾಖಲೆಯನ್ನು ಆಧರಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ಬಿಸಿಸಿಐ 2023-24ರ ಆರ್ಥಿಕ ಸಾಲಿನಲ್ಲಿ 7,476 ಕೋಟಿ ಗಳಿಸುವ ನಿರೀಕ್ಷೆಯಿದೆ ಆದರೆ ವಾಸ್ತವಿಕ ಆದಾಯವು 8,995 ಕೋಟಿ ರೂ. ಸಾಮಾನ್ಯ ನಿಧಿ ಕೂಡ 6,365 ಕೋಟಿಯಿಂದ 7,988 ಕೋಟಿಗೆ ಏರಿಕೆಯಾಗಿದೆ. 2024-25ರ ಆರ್ಥಿಕ ಸಾಲಿನಲ್ಲಿ ಬಿಸಿಸಿಐ 10,054 ಕೋಟಿ ರೂಪಾಯಿಗಳನ್ನು ಗಳಿಸುವ ನಿರೀಕ್ಷೆಯಿದೆ ಮತ್ತು ಒಟ್ಟು ಬಜೆಟ್ ವೆಚ್ಚವನ್ನು 2,348 ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಬಿಸಿಸಿಐನ 38 ರಾಜ್ಯಗಳ ಕ್ರಿಕೆಟ್‌ ಮಂಡಳಿಗಳನ್ನು ಹೊಂದಿದ್ದು, ಇವುಗಳು ವಾರ್ಷಿಕ ಅನುದಾನವನ್ನು ಅವಲಂಬಿಸಿವೆ. ಬಿಸಿಸಿಐನ ದಾಖಲೆಗಳ ಪ್ರಕಾರ ರಾಜ್ಯದ ಪ್ರತಿಯೊಂದು ಕ್ರಿಕೆಟ್‌ ಮಂಡಳಿಯು ವಾರ್ಷಿಕವಾಗಿ ಸುಮಾರು 499 ಕೋಟಿ ರೂ. ಗಳನ್ನು ಪಡೆಯಲಿವೆ.