ಸಿಡ್ನಿ: ಇದೇ ವರ್ಷಾಂತ್ಯದಲ್ಲಿ ಭಾರತ ತಂಡ 5 ಪಂದ್ಯಗಳ ಬಾರ್ಡರ್-ಗವಾಸ್ಕರ್(Border Gavaskar Trophy) ಟೆಸ್ಟ್ ಸರಣಿಯನ್ನಾಡಲು ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳಲಿದೆ. ಈ ಸರಣಿ ಆರಂಭಕ್ಕೂ ಮುನ್ನವೇ ಆಸೀಸ್ ಆಟಗಾರರು ಭಾರತದ ಆತ್ಮವಿಶ್ವಾಸವನ್ನು ಕುಗ್ಗಿಸಲು ಮೈಂಡ್ ಗೇಮ್ ಆರಂಭಿಸಿದ್ದಾರೆ. ಇದೀಗ ಈ ಸಾಲಿಗೆ ಸ್ಪಿನ್ನರ್ ನಥನ್ ಲಿಯೋನ್(Nathan Lyon) ಸೇರ್ಪಡೆಗೊಂಡಿದ್ದಾರೆ. ಭಾರತವನ್ನು 5-0 ಅಂತರದಿಂದ ಸೋಲಿಸಲಿದ್ದೇವೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಅಲಿಸ್ಸಾ ಹೀಲಿ ಅವರ ಜತೆಗಿನ ವಿಲ್ಲೋ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಲಿಯೋನ್, “ಭಾರತ ತಂಡ ಇತ್ತೀಗೆಚೆ ಆಡುತ್ತಿರುವ ಎಲ್ಲ ಟೆಸ್ಟ್ ಪಂದ್ಯಗಳನ್ನು ನಾನು ಸೂಕ್ಷವಾಗಿ ಗಮನಿಸಿದ್ದೇನೆ. ಈ ಬಾರಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು 5-0 ಅಂತರದಲ್ಲಿ ಸೋಲಿಸಲು ನಮ್ಮ ತಂಡದ ಆಟಗಾರರು ಎಲ್ಲ ಪೂರ್ವ ತಯಾರಿ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ IND vs BAN: ಮೊದಲ ಟೆಸ್ಟ್ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡದ ವರದಿ ಹೀಗಿದೆ
ನಥನ್ ಲಿಯೋನ್ ಭಾರತದ ಎದುರು 27 ಬಾರ್ಡರ್-ಗವಾಸ್ಕರ್ ಟೆಸ್ಟ್ ಪಂದ್ಯಗಳನ್ನು ಆಡಿ 121 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕೆಲ ದಿನಗಳ ಹಿಂದೆ ಆಸೀಸ್ ವೇಗಿ ಸ್ಕಾಟ್ ಬೋಲ್ಯಾಂಡ್(Scott Boland), “ನಾವು ಉತ್ತಮ ದರ್ಜೆಯ ಬೌಲಿಂಗ್ ದಾಳಿಯನ್ನು ಹೊಂದಿದ್ದೇವೆ ಎಂದು ನಾನು ಭಾವಿಸುತ್ತೇನೆ. ಈ ಬಾರಿ ಭಾರತಕ್ಕೆ ಆಸೀಸ್ ನಲದಲ್ಲಿ ಸರಣಿ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಕೊಹ್ಲಿಯ ವಿಕೆಟ್ ಪಡೆಯಲು ನಾನು ಕಾತರಗೊಂಡಿದ್ದೇನೆ” ಎಂದು ಹೇಳಿದ್ದರು.
5 ಪಂದ್ಯಗಳ ಈ ಟೆಸ್ಟ್ ಸರಣಿ ನವೆಂಬರ್ 22ರಿಂದ ಜನವರಿ(2025) 7ರವರೆಗೆ ನಡೆಯಲಿದೆ. ಪರ್ತ್, ಅಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಈ ಪಂದ್ಯಗಳು ನಡೆಯಲಿದೆ. ಅಡಿಲೇಡ್ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಆಗಿದೆ.
2018-19ರಲ್ಲಿ ಮೊಟ್ಟ ಮೊದಲ ಬಾರಿ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ, ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ನಂತರ 2020-21ರಲ್ಲಿ ಹಂಗಾಮಿ ನಾಯಕ ಅಜಿಂಕ್ಯಾ ರಹಾನೆ ನೇತೃತ್ವದಲ್ಲಿ ಎರಡನೇ ಬಾರಿ ಸರಣಿ ಗೆದ್ದ ಸಾಧನೆ ಮಾಡಿತ್ತು. 2014-15ರ ಸಾಲಿನಿಂದ ಇಲ್ಲಿಯವರೆಗೂ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡ ಟೆಸ್ಟ್ ಸರಣಿ ಗೆದ್ದಿಲ್ಲ. ಅಂದಿನಿಂದ ಇಲ್ಲಿಯವರೆಗೂ ಭಾರತ ತಂಡ ಸತತವಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಪ್ರಾಬಲ್ಯ ಮೆರೆದಿದೆ. ಈ ಬಾರಿ ಗೆದ್ದರೆ ಹ್ಯಾಟ್ರಿಕ್ ಸಾಧನೆ ಮಾಡಲಿದೆ.
ಕೊಹ್ಲಿ 2011 ರಿಂದ 2023ರ ತನಕ ಆಡಿದ ಬಾರ್ಡರ್-ಗವಾಸ್ಕರ್ ಟೆಸ್ಟ್ ಪಂದ್ಯಗಳಲ್ಲಿ ಪಟ್ಟು 1,979 ರನ್ ಬಾರಿಸಿ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ 7ನೇ ಸ್ಥಾನಿಯಾಗಿದ್ದಾರೆ. ಚೇತೇಶ್ವರ್ ಪೂಜಾರ 2,033 ರನ್ ಬಾರಿಸಿ 6ನೇ ಸ್ಥಾನಿಯಾಗಿದ್ದಾರೆ. 3,262 ರನ್ ಬಾರಿಸಿರುವ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನ ಪಡೆದಿದ್ದಾರೆ.