Saturday, 2nd November 2024

Border-Gavaskar Trophy: ಅಭ್ಯಾಸ ಪಂದ್ಯ ಕೈಬಿಟ್ಟ ಭಾರತ

ನವದೆಹಲಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇದೇ ತಿಂಗಳು 22ರಿಂದ ಆರಂಭವಾಗಲಿರುವ ಪ್ರತಿಷ್ಠಿತ ಬಾರ್ಡರ್‌-ಗವಾಸ್ಕರ್‌(Border-Gavaskar Trophy) ಟೆಸ್ಟ್‌ ಸರಣಿ ಆರಂಭಕ್ಕೂ ಮುನ್ನ ಪ್ರವಾಸಿ ಭಾರತ ತಂಡ ಭಾರತ “ಎ’ ವಿರುದ್ಧ ಆಡಬೇಕಿದ್ದ ತ್ರಿದಿನ ಅಭ್ಯಾಸ ಪಂದ್ಯವನ್ನು ರದ್ದು ಮಾಡಿದೆ. ಹೆಚ್ಚುವರಿ ನೆಟ್‌ ಅಭ್ಯಾಸ ನಡೆಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ.

ಋತುರಾಜ್‌ ಗಾಯಕ್ವಾಡ್‌ ನೇತೃತ್ವದ ಭಾರತ ʼಎʼ ತಂಡದ ವಿರುದ್ಧ ರೋಹಿತ್‌ ಶರ್ಮ ಪಡೆ ಪರ್ಥ್‌ನಲ್ಲಿ ಅಭ್ಯಾಸ ಪಂದ್ಯವೊಂದನ್ನು (ನ.15-17) ಆಡಬೇಕಿತ್ತು. ಆದರೆ, ಕೋಚ್‌ ಗೌತಮ್‌ ಗಂಭೀರ್‌ ಮತ್ತು ತಂಡದ ಕೆಲವು ಹಿರಿಯ ಆಟಗಾರರು ಹೆಚ್ಚುವರಿ ಅಭ್ಯಾಸದ ಅವಧಿಯನ್ನು ಬಯಸಿದ್ದರಿಂದ ಈ ಪಂದ್ಯವನ್ನು ಕೈಬಿಡಲಾಗಿದೆ ಎಂದು ತಿಳಿದು ಬಂದಿದೆ. ಭಾರತ ಹಿಂದಿನೆರಡೂ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅಭ್ಯಾಸ ಪಂದ್ಯವನ್ನಾಡಿಯೇ ಟೆಸ್ಟ್‌ ಸರಣಿಯನ್ನು ಆಡಲಿಳಿದಿತ್ತು. ಈ ಬಾರಿ ತವರಿನಲ್ಲೇ ಬ್ಯಾಟಿಂಗ್‌ ವೈಫಲ್ಯ ಕಂಡ ಕಾರಣ ಅಭ್ಯಾಸ ಪಂದ್ಯಕ್ಕಿಂತ ಹೆಚ್ಚುವರಿ ನೆಟ್‌ ಅಭ್ಯಾಸ ನಡೆಸುವ ಯೋಜನೆ ಭಾರತದ್ದು.

ನವೆಂಬರ್ 22ರಿಂದ ಜನವರಿ 7ರವರೆಗೆ ಐದು ಪಂದ್ಯಗಳು ನಡೆಯಲಿದೆ. ಪರ್ತ್, ಅಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಪಂದ್ಯಗಳು ನಡೆಯಲಿದೆ. ಇದರಲ್ಲಿ ಅಡಿಲೇಡ್ ಪಂದ್ಯವು ಪಿಂಕ್ ಬಾಲ್ ಟೆಸ್ಟ್ ಆಗಿರಲಿದೆ.

ಇದನ್ನೂ ಓದಿ IND vs NZ: ಮೂರನೇ ಟೆಸ್ಟ್‌ನಲ್ಲೂ ಸಂಕಷ್ಟಕ್ಕೆ ಸಿಲುಕಿದ ಭಾರತ

1991/92 ರ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾ ಮತ್ತು ಭಾರತವು ಬಾರ್ಡರ್-ಗಾವಸ್ಕರ್ ಟ್ರೋಫಿಯ ಭಾಗವಾಗಿ ಐದು ಪಂದ್ಯಗಳ ಸರಣಿಯನ್ನು ಆಡಲಿದೆ. ಇದು ಮುಂದಿನ ವರ್ಷದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಎರಡೂ ತಂಡಗಳಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ.

ಭಾರತವು ಇತ್ತೀಚಿನ ಕೆಲ ವರ್ಷಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಟೆಸ್ಟ್‌ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಲೇ ಬಂದಿದೆ. ಕಳೆದ 4 ಸರಣಿಗಳಲ್ಲಿ ಭಾರತವೇ ಗೆದ್ದು ಬಂದಿದೆ. 2016-17ರಲ್ಲಿ 2-1 (ತವರಿನ ಸರಣಿ), 2018-19ರಲ್ಲಿ 2-1 (ಆಸ್ಟ್ರೇಲಿಯದಲ್ಲಿ), 2020- 21ರಲ್ಲಿ 2-1 (ಆಸ್ಟ್ರೇಲಿಯದಲ್ಲಿ) ಹಾಗೂ 2022-23ರಲ್ಲಿ 2-1 (ತವರಿನ ಸರಣಿ) ಅಂತರದಿಂದ ಭಾರತ ಜಯ ಸಾಧಿಸಿತ್ತು. ಆದಾಗ್ಯೂ, 2023ರಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಪ್ಯಾಟ್ ಕಮಿನ್ಸ್ ತಂಡವು ಭಾರತವನ್ನು ಸೋಲಿಸಿತ್ತು.