ಮುಂಬಯಿ: ನವೆಂಬರ್ 26ರಿಂದ ಭಾರತ (India) ಹಾಗೂ ಆಸ್ಟ್ರೇಲಿಯಾ ನಡುವೆ ಆರಂಭವಾಗಲಿರುವ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ (Border-Gavaskar Trophy) ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಅಲಭ್ಯರಾಗುವುದು ಬಹುತೇಕ ಖಚಿತವಾದಂತಿದೆ. ಕಿವೀಸ್ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ ಮಾತನಾಡಿದ ರೋಹಿತ್, ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಖಚಿತತೆ ಇಲ್ಲ ಎಂದಿದ್ದಾರೆ.
ಕೆಲ ದಿನಗಳ ಹಿಂದೆಯೇ ರೋಹಿತ್ ಆರಂಭಿಕ ಪಂದ್ಯಕ್ಕೆ ಗೈರಾಗಲಿದ್ದಾರೆ ಎಂದು ವರದಿಯಾಗಿತ್ತು. ಈ ಕುರಿತು ಬಿಸಿಸಿಐನ (BCCI) ಹಿರಿಯ ಅಧಿಕಾರಿಯೊಬ್ಬರು, ವೈಯಕ್ತಿಕ ಕಾರಣಗಳನ್ನು ನೀಡಿ ರೋಹಿತ್ (Rohit Sharma) ಸರಣಿಯ ಮೊದಲೆರಡು ಪಂದ್ಯಗಳಿಗೆ ಗೈರಾಗಬಹುದು ಎಂದಿದ್ದರು. ಇದೀಗ ಸ್ವತಃ ರೋಹಿತ್ ಆಡುವ ಬಗ್ಗೆ ಖಚಿತತೆ ಇಲ್ಲ ಎಂದು ಹೇಳಿದ್ದಾರೆ.
ಸದ್ಯಕ್ಕೆ ರೋಹಿತ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿಕೊಳ್ಳಲು ಮಾಜಿ ನಾಯಕ ವಿರಾಟ್ ಕೊಹ್ಲಿ(Virat Kohli), ರಿಷಭ್ ಪಂತ್(Rishabh Pant), ಸೀಮಿತ ಓವರ್ ತಂಡದ ಉಪನಾಯಕ ಶುಭಮಾನ್ ಗಿಲ್, ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಕನ್ನಡಿಗ ಕೆ.ಎಲ್ ರಾಹುಲ್ ರೇಸ್ನಲ್ಲಿದ್ದಾರೆ. ಒಂದು ವೇಳೆ ರೋಹಿತ್ ಅವರ ಪತ್ನಿ ರಿತಿಕಾ ಆಸ್ಟ್ರೆಲಿಯಾ ಪ್ರವಾಸಕ್ಕೆ ಮೊದಲೇ ಮಗುವಿಗೆ ಜನ್ಮ ನೀಡಿದರೆ ಆಗ ರೋಹಿತ್ ಎಲ್ಲ 5 ಟೆಸ್ಟ್ ಪಂದ್ಯಗಳಲ್ಲೂ ಆಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇದನ್ನೂ ಓದಿ IND vs NZ: ಭಾರತಕ್ಕೆ ಕಬ್ಬಿಣದ ಕಡಲೆಯಾದ ಸ್ಪಿನ್ ಪಿಚ್
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2018-19ರಲ್ಲಿ ಭಾರತ ತಂಡ ಆಸೀಸ್ ಪ್ರವಾಸದಲ್ಲಿ 2-1 ಅಂತರದಿಂದ ಸರಣಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿತ್ತು. ಅದು ಭಾರತ ಆಸೀಸ್ ನೆಲದಲ್ಲಿ ಗೆದ್ದ ಮೊದಲ ಸರಣಿ ಗೆಲುವಾಗಿತ್ತು. 2020- 21ರಲ್ಲಿ ವಿರಾಟ್ ಅನುಪಸ್ಥಿತಿಯಲ್ಲಿ ಅಜಿಂಕ್ಯಾ ರಹಾನೆ ಸಾರಥ್ಯದಲ್ಲಿ ಭಾರತ 2-1 ಅಂತರದಿಂದ ಸರಣಿ ಜಯಿಸಿತ್ತು. ರಹಾನೆ ಈಗ ತಂಡದಲ್ಲಿ ಇರದ ಕಾರಣ ವಿರಾಟ್ ಕೊಹ್ಲಿಗೆ ನಾಯಕತ್ವ ವಹಿಸಲಿದ್ದಾರೆ ಎನ್ನಲಾಗಿದೆ.
ಪಂತ್ 2020- 21ರ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗಾಬಾದಲ್ಲಿ ನಡೆದ ಅಂತಿಮ ಪಂದ್ಯವನ್ನು ಏಕಾಂಗಿಯಾಗಿ ನಿಂತು ಗೆಲ್ಲಿಸಿಕೊಟ್ಟಿದ್ದರು. ಒಂದೊಮ್ಮೆ ಕೊಹ್ಲಿ ನಾಯಕತ್ವ ವಹಿಸಿಕೊಳ್ಳಲು ಒಪ್ಪದಿದ್ದರೆ ಆಗ ಪಂತ್ಗೆ ಈ ಜವಾಬ್ದಾರಿ ಸಿಗುವುದು ಖಚಿತ. ಇದೇ ವರ್ಷ ನಡೆದಿದ್ದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಂತ್ ನಡೆಸಿದ ಉಪಾಯದಿಂದ ಪಂದ್ಯ ಗೆಲ್ಲಲು ಸಹಕಾರಿಯಾಗಿತ್ತು ಎಂದು ಸ್ವತಃ ರೋಹಿತ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಹೀಗಾಗಿ ರೋಹಿತ್ ಅವರು ಪಂತ್ ಹೆಸರನ್ನು ತಂಡದ ಮ್ಯಾನೆಜ್ಮೆಂಟ್ಗೆ ಸೂಚಿಸಬಹುದು.