Monday, 25th November 2024

Border-Gavaskar Trophy: ಶಮಿ ಇಲ್ಲದ ಭಾರತಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದ ಮಾಜಿ ಆಟಗಾರ

ಸಿಡ್ನಿ: ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ರೋಮಾಂಚನಕಾರಿ ಟೆಸ್ಟ್ ಸರಣಿಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್‌-ಗವಾಸ್ಕರ್ ಟ್ರೋಫಿ(Border-Gavaskar Trophy) ಕೂಡ ಪ್ರಮುಖವಾಗಿದೆ. ಕಳೆದೆರಡು ಆಸೀಸ್‌ ಪ್ರವಾಸದಲ್ಲಿಯೂ ಭಾರತವೇ ಸರಣಿ ಗೆದ್ದು ಬೀಗಿತ್ತು. ಇದೀಗ ಹ್ಯಾಟ್ರಿಕ್‌ ಸರಣಿ ಗೆಲುವಿನ ನಿರೀಕ್ಷೆಯಲ್ಲಿರುವ ಭಾರತ ತಂಡದ ಆತ್ಮವಿಶ್ವಾಸವನ್ನು ಕುಗ್ಗಿಸಲು ಆಸೀಸ್‌ ಮಾಜಿ ಆಟಗಾರರು ಮೈಂಡ್ ಗೇಮ್ ಆರಂಭಿಸಿದ್ದಾರೆ. ಮೊಹಮ್ಮದ್ ಶಮಿ(Mohammed Shami) ಅನುಪಸ್ಥಿತಿ ತಂಡವನ್ನು ಬಲವಾಗಿ ಕಾಡಲಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್(Ricky Ponting) ಭವಿಷ್ಯ ನುಡಿದಿದ್ದಾರೆ.

ಐಸಿಸಿ ಸಂದರ್ಶನದಲ್ಲಿ ಮಾತನಾಡಿರುವ ಪಾಂಟಿಂಗ್, ‘ಭಾರತ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿದೆ. ಆದರೆ ಆಸೀಸ್‌ ತಂಡದ 20 ವಿಕೆಟ್ ಪಡೆಯುವುದೇ ಸವಾಲಾಗಲಿದೆ. ಇದಕ್ಕೆ ಕಾರಣ ಮೊಹಮ್ಮದ್ ಶಮಿ ಅನುಪಸ್ಥಿತಿ. ಭಾರತ ಒಂದು ಪಂದ್ಯ ಗೆಲ್ಲಬಹುದು, ಆದರೆ ಸರಣಿ ಗೆಲುವು ಅಸಾಧ್ಯʼ ಎಂದರು.

ಶಮಿ ಆಸ್ಟ್ರೇಲಿಯಾದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಈ ಹಿಂದಿನ 2 ಪ್ರವಾಸದಲ್ಲಿಯೂ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಶಮಿ ಆಸೀಸ್‌ ನೆಲದಲ್ಲಿ ಇದುವರೆಗೆ ಎಂಟು ಪಂದ್ಯಗಳನ್ನಾಡಿದ್ದು 32.16 ಸರಾಸರಿಯಲ್ಲಿ 56ಕ್ಕೆ 6 ವಿಕೆಟ್‌ ಅತ್ಯುತ್ತಮ ಅಂಕಿ ಅಂಶಗಳೊಂದಿಗೆ 31 ವಿಕೆಟ್‌ಗಳನ್ನು ಪಡೆದಿದ್ದಾರೆ. ಎರಡು ಬಾರಿ ಐದು ವಿಕೆಟ್‌ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ. ಈ ಬಾರಿ ಅವರ ಅನುಪಸ್ಥಿತಿ ಭಾರತಕ್ಕೆ ಭಾರೀ ಹಿನ್ನಡೆ ಉಂಟಾಗಲಿದೆʼ ಎಂದು ಪಾಂಟಿಂಗ್‌ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಬ್ಯಾಟಿಂಗ್‌ನಲ್ಲಿ ಅನುಭವಿ ಸ್ಟೀವನ್‌ ಸ್ಮಿತ್ ಅಥವಾ ರಿಷಭ್ ಪಂತ್ ಇಬ್ಬರಲ್ಲಿ ಒಬ್ಬರು ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸುವ ಸಾಧ್ಯತೆ ಇದೆ ಎಂದಿದ್ದಾರೆ.

ಇದನ್ನೂ ಓದಿ IND vs AUS: ಜಸ್‌ಪ್ರೀತ್‌ ಬುಮ್ರಾ, ಪ್ಯಾಟ್‌ ಕಮಿನ್ಸ್‌ ಬೌಲಿಂಗ್‌ಗೆ ಆಡುವುದು ಕಷ್ಟ ಎಂದ ಜೇಸನ್‌ ಗಿಲೆಸ್ಪಿ!

ತವರಿನಲ್ಲಿ ನ್ಯೂಜಿಲ್ಯಾಂಡ್‌ ಎದುರಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್‌ ವಾಶ್‌ ಆಗಿರುವ ಭಾರತ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶದ ದೃಷ್ಟಿಯಿಂದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಮಾಡು ಇಲ್ಲವೇ ಮಡಿ ಸರಣಿ ಎನಿಸಿಕೊಂಡಿದೆ.

ಭಾರತ 1991-92ರ ಬಳಿಕ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯದಲ್ಲಿ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. ಭಾರತ ತಂಡವು ನವೆಂಬರ್ 30 ಮತ್ತು ಡಿಸೆಂಬರ್ 1 ರಂದು ಕ್ಯಾನ್‌ಬೆರಾದ ಮನುಕಾ ಓವಲ್‌ ನಲ್ಲಿ ಪ್ರಧಾನ ಮಂತ್ರಿ ಇಲೆವೆನ್ ವಿರುದ್ಧ ಹಗಲು-ರಾತ್ರಿ ಅಭ್ಯಾಸ ಪಂದ್ಯವನ್ನು ಆಡಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಮ್ಮ ವೆಬ್‌ಸೈಟ್‌ ನಲ್ಲಿ ತಿಳಿಸಿದೆ. 1991-92ರಲ್ಲಿ ನಡೆದಿದ್ದ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಆಸ್ಟ್ರೇಲಿಯಾ 4-0 ಅಂತರದ ಗೆಲುವು ಸಾಧಿಸಿತ್ತು.

5 ಪಂದ್ಯಗಳ ಈ ಟೆಸ್ಟ್​ ಸರಣಿ ನವೆಂಬರ್ 22ರಿಂದ ಜನವರಿ(2025) 7ರವರೆಗೆ ನಡೆಯಲಿದೆ. ಪರ್ತ್, ಅಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಈ ಪಂದ್ಯಗಳು ನಡೆಯಲಿದೆ. ಅಡಿಲೇಡ್ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಆಗಿದೆ. ಪುರುಷರ ಕ್ರಿಕೆಟ್ ತಂಡದ ಜತೆಗೆ ಇದೇ ಸಮಯದಲ್ಲೇ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಏಕದಿನ ಸರಣಿ ಕೂಡ ನಡೆಯಲಿದೆ. ಡಿಸೆಂಬರ್‌ 6ರಿಂದ ಅಡಿಲೇಡ್​ನಲ್ಲಿ ನಡೆಯಲಿರುವ ಎರಡನೇ ಪಂದ್ಯ ಪಿಂಕ್‌ ಬಾಲ್​ ಟೆಸ್ಟ್‌ ಪಂದ್ಯವಾಗಿರಲಿದೆ.