Tuesday, 5th November 2024

Boxer Imane Khelif: ವಿವಾದದ ನಡುವೆಯೇ ಒಲಿಂಪಿಕ್‌ ಚಿನ್ನ ಗೆದ್ದ ಇಮಾನೆ ಖೇಲಿಫ್ ಹೆಣ್ಣಲ್ಲ, ಗಂಡು!

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರೀ ವಿವಾದಕ್ಕೆ ಗ್ರಾಸವಾಗಿ ಮಹಿಳೆಯರ ಬಾಕ್ಸಿಂಗ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಅಲ್ಜೀರಿಯಾದ ಬಾಕ್ಸರ್ ಇಮಾನೆ ಖೆಲಿಫ್(Boxer Imane Khelif) ಹೆಣ್ಣಲ್ಲ, ಗಂಡು! ಎಂಬ ವೈದ್ಯಕೀಯ ವರದಿಯೊಂದು ಸೋರಿಕೆಯಾಗಿದೆ. ಇದರ ಬೆನ್ನಲ್ಲೇ ಟೀಮ್‌ ಇಂಡಿಯಾದ ಮಾಜಿ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಟ್ವೀಟ್‌ ಮಾಡಿದ್ದು ಇಮಾನೆ ಖೆಲಿಫ್ ಗೆದ್ದ ಪದಕವನ್ನು ತಕ್ಷಣ ಹಿಂಪಡೆಯಿರಿ ಎಂದು ಒಲಿಂಪಿಕ್‌ ಸಮಿತಿಗೆ ಒತ್ತಾಯಿಸಿದ್ದಾರೆ.

ಖೆಲಿಫ್ ಹೆಣ್ಣೇ ಅಲ್ಲ ಅವರು ಗಂಡು ಎಂದು ಹೇಳಲಾಗಿದ್ದು ಈ ಕುರಿತ ವೈದ್ಯಕೀಯ ವರದಿಯೊಂದು ಸೋರಿಕೆಯಾಗಿದೆ. ಫ್ರೆಂಚ್ ಪತ್ರಕರ್ತ ಜಾಫರ್ ಐಟ್ ಔಡಿಯಾ ಈ ವರದಿಯನ್ನು ಹೊರಹಾಕಿದ್ದು ಖೆಲಿಫ್ ಆಂತರಿಕ ವೃಷಣಗಳು ಮತ್ತು XY ಕ್ರೋಮೋಸೋಮ್‌ಗಳನ್ನು ಹೊಂದಿದ್ದಾರೆ. ಹೀಗಾಗಿ ಅವರು ಹೆಣ್ಣೇ ಅಲ್ಲ. ಅವರು ಗಂಡು ಎಂದು ವಾದಿಸಿದ್ದಾರೆ. ಅಲ್ಲದೆ ಈ ಪರಿಸ್ಥಿತಿಯು 5-ಆಲ್ಫಾ ರಿಡಕ್ಟೇಸ್ ಕೊರತೆ ಎಂಬ ಅಸ್ವಸ್ಥತೆಯನ್ನು ಸೂಚಿಸುತ್ತದೆ ಎಂದು ವರದಿ ಮಾಡಿದ್ದಾರೆ.

ಪ್ಯಾರಿಸ್‌ನ ಕ್ರೆಮ್ಲಿನ್-ಬೈಸೆಟ್ರೆ ಆಸ್ಪತ್ರೆ ಮತ್ತು ಅಲ್ಜೀರ್ಸ್‌ನ ಮೊಹಮದ್ ಲ್ಯಾಮಿನ್ ಡೆಬಾಘೈನ್ ಆಸ್ಪತ್ರೆಯ ತಜ್ಞರು ಈ ವರದಿ ತಯಾರಿಸಿದ್ದಾರೆ ಎಂದು ಹೇಳಲಾಗಿದ್ದು, ವರದಿಯಲ್ಲಿ, ಖೇಲಿಫ್‌ನ ಜೈವಿಕ ಗುಣಲಕ್ಷಣಗಳಾದ ಆಂತರಿಕ ವೃಷಣಗಳ ಅಸ್ತಿತ್ವ ಮತ್ತು ಕೊರತೆ ಗರ್ಭಾಶಯವನ್ನು ಸಂಪೂರ್ಣವಾಗಿ ವಿವರಿಸಲಾಗಿದೆ. MRI ವರದಿಯು ಮೈಕ್ರೊಪೆನಿಸ್ ಇರುವಿಕೆಯನ್ನು ಸೂಚಿಸಿದೆ ಎಂದು ಹೇಳಲಾಗಿದೆ.

ಒಲಿಂಪಿಕ್ಸ್​ 2024ರ ಪದಕದಾಟದಲ್ಲಿ ನಡೆದ ಮಹಿಳೆಯರ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ದೊಡ್ಡ ವಿವಾದವೊಂದು ಭುಗಿಲೆದ್ದಿತ್ತು. ವುಮೆನ್ಸ್​​ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಇಟಾಲಿ ಮೂಲದ ಬಾಕ್ಸರ್ ಏಂಜಲೀನಾ ಕ್ಯಾರಿನಿ ತಮ್ಮ ಎದುರಾಳಿಯಾಗಿದ್ದ ಇಮಾನೆ ಖೆಲಿಫ್ ವಿರುದ್ಧದ ಕಾಳಗದಲ್ಲಿ 46 ಸೆಕೆಂಡ್​ಗೆ ಮ್ಯಾಚ್​ ತ್ಯಜಿಸಿ, ಹೊರಬಂದಿದ್ದರು.

ನಾಲ್ಕು ರೌಂಡ್​ವರೆಗೂ ಹೋಗಬೇಕಿದ್ದ ಪಂದ್ಯವನ್ನು ಕೇವಲ 2ನೇ ಸುತ್ತಿಗೆ ಅಂತ್ಯಗೊಳಿಸಿದ ಏಂಜೆಲಾ, ಇಂತಹ ಸೋಲನ್ನು ನನ್ನಿಂದ ಒಪ್ಪಿಕೊಳ್ಳಲು ಅಸಾಧ್ಯ ಎಂದು ಆಟ ಅರ್ಧಕ್ಕೆ ಕೈಬಿಡುವ ಮೂಲಕ ದೊಡ್ಡ ವಿವಾದವನ್ನೇ ಹುಟ್ಟುಹಾಕಿದ್ದರು. ಈ ವಿಷಯ ಜಾಗತಿಕ ಮಟ್ಟದಲ್ಲಿಯೂ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇಮಾನೆ ಖೇಲಿಫ್ ಮಹಿಳೆಯಲ್ಲ, ಪುರುಷ ಎನ್ನುವುದು ಏಂಜಲೀನಾ ಕ್ಯಾರಿನಿ ಮತ್ತು ಅವರ ಕೋಚ್‌ ವಾದವಾಗಿತ್ತು.

ಇಮಾನೆ ಖೆಲಿಫ್ 2023ರ ಒಲಿಂಪಿಕ್ಸ್​ನಲ್ಲಿ ಲಿಂಗ ಅರ್ಹತಾ ಪರೀಕ್ಷೆಯಲ್ಲಿ ವಿಫಲವಾಗಿದ್ದರು. ಹೀಗಿದ್ದ ಮೇಲೆ ಏಕೆ ಅವರನ್ನು ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಆಡಲು ಅವಕಾಶ ಕೊಡಬೇಕಿತ್ತು? ಎಂದು ಅನೇಕ ಕ್ರೀಡಾಪಟುಗಳು ಖೇಲಿಫ್​ ವಿರುದ್ಧ ಕಿಡಿಕಾರಿದ್ದರು. ಇದಕ್ಕೆಲ್ಲಾ ಒಲಿಂಪಿಕ್ಸ್​ನಲ್ಲಿ ಅವಕಾಶ ಕೊಡಬಾರದು ಎಂಬ ಕೂಗುಗಳು ವ್ಯಾಪಕವಾಗಿ ಕೇಳಿಬಂದಿತ್ತು. ಇದಾದ ಬಳಿಕವೂ ಇಮಾನೆ ವಿರುದ್ಧ ಟೀಕೆಗಳು ಮುಂದುವರೆದಿತ್ತು. ಭಾರೀ ವಿವಾದಗಳ ನಡುವೆಯೂ ಬಾಕ್ಸಿಂಗ್​ ಫೈನಲ್​ ತಲುಪಿದ್ದ ಖೇಲಿಫ್ ಇದೀಗ ಅಂತಿಮ ಕಾಳಗದಲ್ಲಿ ಚೀನಾದ ಯಾಂಗ್ ಲಿಯುರನ್ನು 5:0 ಅಂತರದಿಂದ ಮಣಿಸಿ ಚಿನ್ನ ಗೆದ್ದಿದ್ದರು. ಇದೀಗ ಇಮಾನೆ ಖೆಲಿಫ್ ಹೆಣ್ಣಲ್ಲ, ಗಂಡು ಎಂಬ ವಿಚಾರ ಬೆಳಕಿಗೆ ಬಂದಿದ್ದು ಅವರು ಗೆದ್ದ ಪದಕವನ್ನು ಅನರ್ಹಗೊಳಿಸಬೇಕು ಎಂಬ ಕೂಗು ಕೇಳಿ ಬಂದಿದೆ.