Saturday, 4th January 2025

World Blitz Championship: ಚೆಸ್ ಇತಿಹಾಸದಲ್ಲೇ ಕಾರ್ಲಸನ್, ಇಯಾನ್ ಜಂಟಿ ವಿಜೇತರು

ನ್ಯೂಯಾರ್ಕ್‌: ಚೆಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪುರುಷರ ವಿಶ್ವ ಬ್ಲಿಟ್ಜ್ ಚಾಂಪಿಯನ್‌ಶಿಪ್‌ನಲ್ಲಿ (World Blitz Championship) ಇಬ್ಬರು ಸ್ಪರ್ಧಾಳುಗಳು ಜಂಟಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ ಅತ್ಯಂತ ಜಿದ್ದಾಜಿದ್ದಿನ ಫೈನಲ್‌ ಪಂದ್ಯದಲ್ಲಿ ಪ್ರಶಸ್ತಿಗಾಗಿ ವಿಶ್ವದ ಅಗ್ರಮಾನ್ಯ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲಸನ್(Magnus Carlsen) ಮತ್ತು ರಷ್ಯಾದ ಇಯಾನ್ ನಿಪೊಮ್‌ನಿಷಿ(Ian Nepomniachtchi) ನಡುವಣ ಪಂದ್ಯ 2-2ರ ಅಂತರದಲ್ಲಿ ಡ್ರಾ ಕಂಡಿತು. ಆ ಬಳಿಕ ಫಲಿತಾಂಶಕ್ಕಾಗಿ ನಡೆಸಿದ ‘ಸಡನ್ ಡೆತ್’ ಗೇಮ್ ಕೂಡ ಮೂರು ಬಾರಿ ಡ್ರಾಗೊಂಡಿತು. ಅಂತಿಮವಾಗಿ ಉಭಯ ಆಟಗಾರರು ಪ್ರಶಸ್ತಿಯನ್ನು ಜಂಟಿಯಾಗಿ ಹಂಚಿಕೊಳ್ಳಲು ನಿರ್ಧರಿಸಿದರು.

‘ದಿನವಿಡೀ ನಾವು ಹೋರಾಡಿದೆವು. ಅನೇಕ ಪಂದ್ಯಗಳನ್ನು ಆಡಿದೆವು. ಈಗಾಗಲೇ ಮೂರು ಡ್ರಾ ಫಲಿತಾಂಶ ಕಂಡಿದ್ದೇವೆ. ಇನ್ನೂ ಆಟವನ್ನು ಮುಂದುವರಿಸಬಹುದಿತ್ತು. ಆದರೆ ಪ್ರಶಸ್ತಿ ಹಂಚಿಕೊಳ್ಳುವ ಸೂಕ್ತ ಫಲಿತಾಂಶವೆನಿಸಲಿದೆ. ಪಂದ್ಯ ಮುಗಿಸಲು ಇದಕ್ಕಿಂತ ಉತ್ತಮ ಮಾರ್ಗ ಬೇರೆಯಿಲ್ಲ’ ಎಂದು ಕಾರ್ಲಸನ್ ಪ್ರತಿಕ್ರಿಯಿಸಿದ್ದಾರೆ.

ಕಂಚು ಗೆದ್ದ ವೈಶಾಲಿ

ಭಾರತದ ಗ್ರ್ಯಾಂಡ್‌ಮಾಸ್ಟರ್‌ ಆರ್‌.ವೈಶಾಲಿ(R Vaishali) ಅವರು ವಿಶ್ವ ಬ್ಲಿಟ್ಜ್ ಚಾಂಪಿಯನ್‌ಶಿಪ್‌ನಲ್ಲಿ(World Blitz Championship) ಮಹಿಳೆಯರ ವಿಭಾಗದಲ್ಲಿಕಂಚಿನ ಪದಕವನ್ನು ಜಯಿಸಿದ್ದಾರೆ. ಬುಧವಾರ ನಡೆದ ಟೂರ್ನಿಯ ಸೆಮಿಫೈನಲ್‌ನಲ್ಲಿ ವೈಶಾಲಿ, ಚೀನಾದ ಜು ವೆನ್‌ಜುನ್‌ ವಿರುದ್ಧ 0.5-2.5 ಅಂಕಗಳ ಅಂತರದಲ್ಲಿ ಪರಾಭವಗೊಂಡು ಕಂಚಿಗೆ ತೃಪ್ತಿಪಟ್ಟರು.

ಈ ಮೊದಲು ಚೀನಾದವರೇ ಆದ ಝು ಜಿನರ್‌ ಅವರನ್ನು 2.5-1.5ರ ಅಂಕಗಳ ಅಂತರದಿಂದ ಮಣಿಸಿದ್ದ ವೈಶಾಲಿ, ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದ್ದರು. ಚೀನಾದ ಲೀ ಟಿಂಗ್ಜಿ ಅವರನ್ನು ಮಣಿಸಿದ ಜು ವೆನ್‌ಜುನ್‌ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ವೈಶಾಲಿ ಸಾಧನೆಗೆ ಅಂತರರಾಷ್ಟ್ರೀಯ ಚೆಸ್ ಫೆಡರೇಷನ್ (ಫಿಡೆ) ಉಪಾಧ್ಯಕ್ಷ, ಐದು ಬಾರಿಯ ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ