Saturday, 4th January 2025

Champions Trophy: ಕರಾಚಿ ಆತಿಥ್ಯದ ಪಂದ್ಯಗಳು ಸ್ಥಳಾಂತರ!

ಕರಾಚಿ: ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌(Champions Trophy) ಟೂರ್ನಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಭಾರೀ ಆತಂಕವೊಂದು ಎದುರಾಗಿದೆ. ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದ(Karachi Stadium) ನವೀಕರಣ ಪೂರ್ಣಗೊಳ್ಳದ ಕಾರಣ ಇಲ್ಲಿ ನಿಗದಿಯಾಗಿದ್ದ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಪಿಸಿಬಿ ಮುಂದಾಗಿದೆ ಎಂದು ತಿಳಿದುಬಂದಿದೆ.

ಫೆ.19ರಂದು ನಡೆಯುವ ಟೂರ್ನಿಯ ಉದ್ಘಾಟನ ಪಂದ್ಯ ಕರಾಚಿ ಮೈದಾನದಲ್ಲೇ ನಡೆಯಬೇಕಿದೆ. ಆದರೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸುವ ಸಾಧ್ಯತೆ ಕಂಡುಬಂದಿದೆ. ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ಮುಖಾಮುಖಿಯಾಗಲಿವೆ.

ಗುರುವಾರ ಪಾಕ್‌ ಕ್ರಿಕೆಟ್‌ ಮಂಡಳಿ ವಿಶೇಷ ಸಭೆ ನಡೆಸಿದ್ದು ಈ ಸಭೆಯಲ್ಲಿ ಕರಾಚಿಯಲ್ಲಿ ನಡೆಯುವ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಚರ್ಚೆ ನಡೆಸಿದೆ ಎಂದು ತಿಳಿದುಬಂದಿದೆ. ಲಾಹೋರ್‌, ರಾವಲ್ಪಿಂಡಿ ಸೇರಿದಂತೆ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ನಡೆಯಲಿರುವ ಮೂರು ಕ್ರೀಡಾಂಗಣಗಳಲ್ಲಿ 1,200 ಕೋಟಿ ವೆಚ್ಚದ ನವೀಕರಣ ಮತ್ತು ನಿರ್ಮಾಣ ಕಾರ್ಯವನ್ನು ಪಿಸಿಬಿ ನಡೆಸುತ್ತಿದೆ.

‘ನವೀಕರಣ ಹಾಗೂ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿದೆ. ಟೂರ್ನಿಯ ವೇಳೆಗೆ ಮೈದಾನ ಸಜ್ಜುಗೊಳ್ಳುವುದು ಅನುಮಾನ ಎನ್ನುವಂತಿದೆ. ಆಟಗಾರ ಸುರಕ್ಷತೆಗಾಗಿ ಕರಾಚಿಯ ನ್ಯಾಷನಲ್‌ ಸ್ಟೇಡಿಯಂನಲ್ಲಿ (ಎನ್‌ಎಸ್‌ಕೆ) ಯಾವುದೇ ಪಂದ್ಯಗಳನ್ನು ನಡೆಸದಿರಲು ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದು ಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ಕೆಲ ದಿನಗಳ ಹಿಂದೆ ರಾವಲ್ಪಿಂಡಿ ಸ್ಟೇಡಿಯಂನಲ್ಲಿ ಕಾಮಗಾರಿ ನಡೆಸುತ್ತಿರುವ ವಿಡಿಯೊ ವೈರಲ್‌ ಆಗಿತ್ತು. ಈ ವಿಡಿಯೊ ನೋಡುವಾಗ ಪಂದ್ಯಾವಳಿ ವೇಳೆಗೆ ಮೈದಾನ ಸಿದ್ಧಗೊಳ್ಳುವುದು ಅನುಮಾನ ಎನ್ನುವಂತಿತ್ತು. ಒಟ್ಟಾರೆ ಪಾಕ್‌ನಲ್ಲಿ ಪಂದ್ಯಗಳು ನಡೆಯುವುದೇ ಕಷ್ಟ ಸಾಧ್ಯ ಎನ್ನುವಂತಿದೆ. ಸ್ವತಃ ಪಾಕ್‌ ಮಾಧ್ಯಮಗಳೇ ಈ ಕುರಿತು ವರದಿ ಮಾಡಲಾರಂಭಿಸಿದೆ.

ಇದನ್ನೂ ಓದಿ Champions Trophy schedule: ಫೆ 23ಕ್ಕೆ ಭಾರತ-ಪಾಕ್‌ ಪಂದ್ಯ, ಚಾಂಪಿಯನ್ಸ್‌ ಟ್ರೋಫಿಯ ಸಂಪೂರ್ಣ ವೇಳಾಪಟ್ಟಿ!

ಭಾರತದ ಪಂದ್ಯಗಳು ತಟಸ್ಥ ತಾಣವಾದ ದುಬೈನಲ್ಲಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಪಂದ್ಯ 2025ರ ಫೆಬ್ರವರಿ 23ರಂದು ದುಬೈನಲ್ಲಿ ನಡೆಯಲಿದೆ.  19 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಭಾರತ ಒಳಗೊಂಡ 3 ಲೀಗ್​ ಪಂದ್ಯಗಳು ಮತ್ತು ಒಂದು ಸೆಮಿಫೈನಲ್​ ಪಂದ್ಯ ದುಬೈನಲ್ಲಿ ನಿಗದಿಯಾಗಿದೆ. ಟೂರ್ನಿಯ ಉಳಿದ 9 ಲೀಗ್​ ಮತ್ತು ಇನ್ನೊಂದು ಸೆಮಿಫೈನಲ್​ ಪಂದ್ಯ ಪಾಕಿಸ್ತಾನದ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್​ನಲ್ಲಿ ನಿಗದಿಯಾಗಿವೆ. 2ನೇ ಸೆಮಿಫೈನಲ್​ ಮಾರ್ಚ್​ 2ರಂದು ಲಾಹೋರ್​ನಲ್ಲಿ ನಿಗದಿಯಾಗಿದೆ. ಟೂರ್ನಿಯಲ್ಲಿ ಆಡುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್​ ರಾಬಿನ್​ ಲೀಗ್​ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್​ಗೇರಲಿವೆ.