ಕಾಬುಲ್: ಫೆ.19ರಿಂದ ಆರಂಭಗೊಳ್ಳುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ(Champions Trophy) ಅಫ್ಘಾನಿಸ್ತಾನ ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಕಳೆದ ವರ್ಷ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನದ ಮೂಲಕ ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿ ಹಲವು ಬಲಿಷ್ಠ ತಂಡಗಳಿಗೆ ಸೋಲುಣಿಸಿ ಅಫ್ಘಾನಿಸ್ತಾನ ಸೆಮಿಫೈನಲ್ ಪ್ರವೇಶಿಸಿತ್ತು. ಹೀಗಾಗಿ ಈ ಬಾರಿಯ ಕೂಟದಲ್ಲಿ ತಂಡದ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ.
ಅಚ್ಚರಿ ಎಂದರೆ ಅನುಭವಿ ರಶೀದ್ ಖಾನ್ ತಂಡದಲ್ಲಿರೂ ಅವರಿಗೆ ನಾಯಕತ್ವ ನೀಡಲಿಲ್ಲ. ತಂಡವನ್ನು ಮಧ್ಯಮ ಕ್ರಮಾಂಕದ ಆಟಗಾರ ಹಶ್ಮತುಲ್ಲಾ ಶಾಹಿದಿ ಮುನ್ನಡೆಸಲಿದ್ದಾರೆ. ಸ್ಪಿನ್ನರ್ ಮುಜೀಬ್ ಉರ್ ರಹಿಮಾನ್ ಅವರನ್ನು ಕೈಬಿಡಲಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ ತಂಡಕ್ಕೆ ಮರಳಿದ್ದಾರೆ. ಫೆ.21ರಂದು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಅಭಿಯಾನ ಆರಂಭಿಸಲಿದೆ. ನಂತರ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಭಾರತ ಒಳಗೊಂಡ 3 ಲೀಗ್ ಪಂದ್ಯಗಳು ಮತ್ತು ಒಂದು ಸೆಮಿಫೈನಲ್ ಪಂದ್ಯ ದುಬೈನಲ್ಲಿ ನಿಗದಿಯಾಗಿದೆ. ಟೂರ್ನಿಯ ಉಳಿದ 9 ಲೀಗ್ ಮತ್ತು ಇನ್ನೊಂದು ಸೆಮಿಫೈನಲ್ ಪಂದ್ಯ ಪಾಕಿಸ್ತಾನದ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ನಲ್ಲಿ ನಿಗದಿಯಾಗಿವೆ. 2ನೇ ಸೆಮಿಫೈನಲ್ ಮಾರ್ಚ್ 2ರಂದು ಲಾಹೋರ್ನಲ್ಲಿ ನಿಗದಿಯಾಗಿದೆ. ಟೂರ್ನಿಯಲ್ಲಿ ಆಡುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್ ರಾಬಿನ್ ಲೀಗ್ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್ಗೇರಲಿವೆ.
ತಂಡ
ಹಶ್ಮತುಲ್ಲಾ ಶಾಹಿದಿ (ನಾಯಕ), ಇಬ್ರಾಹಿಂ ಜದ್ರಾನ್, ರಹಮಾನುಲ್ಲಾ ಗುರ್ಬಾಜ್, ಸೇದಿಕುಲ್ಲಾ ಅಟಲ್, ರಹಮತ್ ಷಾ, ಇಕ್ರಮ್ ಅಲಿಖಿಲ್, ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ರಶೀದ್ ಖಾನ್, ಎಎಮ್ ಗಜನ್ಫರ್, ನೂರ್ ಅಹ್ಮದ್, ಫಜಲ್ಹಕ್ ಫಾರೂಕಿ, ಫರೀದ್ ಮಲಿಕ್, ನವೀದ್ ಜದ್ರಾನ್.
ಆಪ್ಘಾನ್ ವೇಳಾಪಟ್ಟಿ
ಫೆ. 21 ಅಫ್ಘಾನಿಸ್ತಾನ-ದಕ್ಷಿಣ ಆಫ್ರಿಕಾ, ಸ್ಥಳ: ಕರಾಚಿ
ಫೆ. 26 ಅಫ್ಘಾನಿಸ್ತಾನ-ಇಂಗ್ಲೆಂಡ್,ಸ್ಥಳ: ಲಾಹೋರ್
ಫೆ. 28 ಅಫ್ಘಾನಿಸ್ತಾನ-ಆಸ್ಟ್ರೆಲಿಯಾ,ಸ್ಥಳ: ಲಾಹೋರ್