ದುಬೈ: ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್ ಟ್ರೋಫಿಯ(Champions Trophy) ಸುತ್ತಲಿನ ಬಿಕ್ಕಟ್ಟನ್ನು ಪರಿಹರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತನ್ನ ನಿರ್ದೇಶಕರ ಮಂಡಳಿಯ ಸಭೆಯನ್ನು ಶುಕ್ರವಾರ (ನ 29) ನಡೆಸಲಿದೆ. ಆನ್ಲೈನ್ನಲ್ಲಿ ನಡೆಯಲಿರುವ ಈ ಸಭೆಯು ಎಲ್ಲಾ ಸದಸ್ಯ ಮಂಡಳಿಗಳಿಗೆ ಬದ್ಧವಾಗಿರುವ ನಿರ್ಣಾಯಕ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಆದರೆ, ಕ್ರಿಕ್ಬಝ್ ವರದಿ ಮಾಡಿದ ಪ್ರಕಾರ ಟೂರ್ನಿ ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಐಸಿಸಿ ತೀರ್ಮಾನಿಸಿದೆ ಎಂದು ತಿಳಿಸಿದೆ.
ಫೆಬ್ರವರಿ 19-ಮಾರ್ಚ್ 9, 15 ಪಂದ್ಯಗಳಿಗೆ ಹೈಬ್ರಿಡ್ ಮಾದರಿಯು ಸ್ವೀಕಾರಾರ್ಹವಲ್ಲ ಎಂದು ಪಾಕಿಸ್ಥಾನ ಕ್ರಿಕೆಟ್ ಮಂಡಳಿ (PCB) ಹೇಳುತ್ತಿದ್ದರೂ ಐಸಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು ಟೂರ್ನಿ ಹೈಬ್ರಿಡ್ ಮಾದರಿಯಲ್ಲೇ ನಡೆಯಲು ನಿರ್ಧರಿಸಲಾಗಿದೆ ಎಂದು ಕ್ರಿಕ್ಬಝ್ ತನ್ನ ವರದಿಯಲ್ಲಿ ತಿಳಿಸಿದೆ. ಅದರಂತೆ, ಪಾಕಿಸ್ತಾನದಲ್ಲಿ 10 ಪಂದ್ಯಗಳು ಮತ್ತು ತಟಸ್ಥ ತಾಣದಲ್ಲಿ ಒಂದು ಸೆಮಿಫೈನಲ್ ಮತ್ತು ಫೈನಲ್ ಸೇರಿದಂತೆ ಐದು ಪಂದ್ಯಗಳನ್ನು ನಡೆಸಲು ಐಸಿಸಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಪಾಕಿಸ್ತಾನಕ್ಕೆ ಪ್ರಯಾಣಿಸದಿರಲು ಭಾರತ ಕ್ರಿಕೆಟ್ ತಂಡ ಹಿಂದೇಟು ಹಾಕಿದ ಕಾರಣ ಟೂರ್ನಿಯ ಆತಿಥ್ಯದಲ್ಲಿ ಗೊಂದಲ ಉಂಟಾಗಿತ್ತು.
ಇದನ್ನೂ ಓದಿ Champions Trophy: ಚಾಂಪಿಯನ್ಸ್ ಟ್ರೋಫಿ ಆತಿಥ್ಯ ಕೈ ತಪ್ಪಿದರೆ ಪಾಕ್ಗೆ 548 ಕೋಟಿ ರೂ. ನಷ್ಟ
ಒಂದು ವೇಳೆ ಪಾಕಿಸ್ತಾನದಲ್ಲಿ ಟೂರ್ನಿ ಸಂಪೂರ್ಣವಾಗಿ ಆಯೋಜನೆಯಾಗದಿದ್ದರೆ ಪಾಕಿಸ್ತಾನ ತಂಡ ಕೂಟದಿಂದ ಹಿಂದೆ ಸರಿಯುವ ಸಾಧ್ಯೆತೆಯಿದೆ. ಪಿಸಿಬಿ ಗೆ ಪಾಕಿಸ್ತಾನ ಸರ್ಕಾರ ಈ ಬಗ್ಗೆ ಸೂಚನೆ ನೀಡಬಹುದು ಎಂದು ವರದಿ ಹೇಳಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಹೈಬ್ರಿಡ್ ಮಾದರಿಯನ್ನು ಒಪ್ಪಲು ನಿರಾಕರಿಸಿದ್ದಾರೆ. ಈ ಬಾರಿ ಏಕದಿನ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಒಂದೊಮ್ಮೆ ಭಾರತ ತಂಡ ಟೂರ್ನಿಯಿಂದ ಹಿಂದೆ ಸರಿದರೆ ಪಾಕ್ ಕ್ರಿಕೆಟ್ ಮಂಡಳಿಗೆ ಉಂಟಾಗುವ ನಷ್ಟದ ಬಗ್ಗೆಯೂ ಐಸಿಸಿ ಮನವರಿಕೆ ಮಾಡಿದೆ. ಆದರೆ ಪಿಸಿಬಿ ಮಾತ್ರ ಪಟ್ಟು ಬಿಡದೆ ಟೂರ್ನಿ ನಡೆಸುವುದಾದರೆ ಪಾಕ್ನಲ್ಲಿಯೇ ನಡೆಯಬೇಕು ಎಂದು ಹೇಳುತ್ತಿದೆ.
ಈಗಾಗಲೇ ಟ್ರೋಫಿ ಆಯೋಜಿಸುವ ಸಲುವಾಗಿ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳನ್ನು ನವೀಕರಿಸಲು ಪಾಕಿಸ್ತಾನವು 17 ಶತಕೋಟಿ ರೂ.ಗಳನ್ನ ವಿನಿಯೋಗಿಸಿದೆ. ಅಲ್ಲದೇ ಇದು ಪಾಕಿಸ್ತಾನದ ಪ್ರತಿಷ್ಠೆಯಾಗಿದ್ದು, ಭಾರತ ತಂಡಕ್ಕಾಗಿ ಎದುರು ನೋಡುತ್ತಿದ್ದೇವೆ. ಕ್ರೀಡೆ ಮತ್ತು ರಾಜಕೀಯ ಪ್ರತ್ಯೇಕ ವಿಷಯಗಳು, ನಾವು ಎರಡನ್ನು ಒಟ್ಟಿಗೆ ಸೇರಿಸುವುದಿಲ್ಲ. ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿರುವ ಎಲ್ಲಾ ತಂಡಗಳು ಬರಲು ಸಿದ್ಧವಾಗಿವೆ. ಭಾರತಕ್ಕೆ ಕಾಳಜಿ ಇದ್ದರೆ ಬರಲಿ. ನಾವು ಕಾಳಜಿಯಿಂದ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.