Sunday, 15th December 2024

ಎಂಟು ವಿಕೆಟ್’ಗಳ ಭರ್ಜರಿ ಜಯ ದಾಖಲಿಸಿದ ಚೆನ್ನೈ

ದುಬೈ: ದುಬೈನಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಚೆನ್ನೈ ಸೂಪರ್‌ ಕಿಂಗ್ಸ್ ಎಂಟು ವಿಕೆಟು ಗಳಿಂದ ಸೋಲಿಸಿದೆ.

ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಆರ್‌.ಸಿ.ಬಿ ತಂಡ ಆರಂಭದಲ್ಲಿ ಆರೋನ್ ಫಿಂಚ್ 15 ರನ್ ಗಳಿಸಿ ಸ್ಯಾಮ್ ಕರನ್ ಬೌಲಿಂಗ್‌ನಲ್ಲಿ ಔಟಾದರು. ದೇವದತ್ ಪಡಿಕಲ್ 22ರನ್ ಗಳಿಸಿ ಮಿಚೆಲ್ ಸ್ಯಾಂಟ್ನರ್ ಅವರಿಗೆ ವಿಕೆಟ್ ಒಪ್ಪಿಸಿದರು. ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ಉತ್ತಮ ಜೊತೆ ಯಾಟವಾಡಿದ್ದು, ಎಬಿ ಡಿವಿಲಿಯರ್ಸ್ 39ರನ್ ಗಳಿಸಿ ದೀಪಕ್ ಚಹಾರ್ ಬೌಲಿಂಗ್ ನಲ್ಲಿ ಔಟಾದರು. ನಂತರ ಬಂದ ಮೊಯಿನ್ ಅಲಿ ಕೇವಲ 1 ರನ್ ಗಳಿಸಿ ಔಟಾದರು. ನಾಯಕ ವಿರಾಟ್ ಕೊಹ್ಲಿ ಕೂಡ 50 ರನ್ ಗಳಿಸಿದ್ದು, ಸ್ಯಾಮ್ ಕರನ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಒಟ್ಟಾರೆ, ಆರ್‌.ಸಿ.ಬಿ ತಂಡ ಆರು ವಿಕೆಟ್ ನಷ್ಟಕ್ಕೆ 145ರನ್ ಗಳ ಮೊತ್ತ ದಾಖಲಿಸಿತು.

ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭದಲ್ಲಿ ಫಾಫ್ ಡು ಪ್ಲೆಸಿಸ್ 25 ರನ್ ಗಳಿಸಿ ಕ್ರಿಸ್ ಮೊರಿಸ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಋತುರಾಜ್ ಗಾಯಕ್ವಾಡ್ ಹಾಗೂ ಅಂಬಟಿ ರಾಯುಡು ಉತ್ತಮ ಜೊತೆಯಾಟವಾಡಿದರು. ಅಂಬಟಿ ರಾಯುಡು 39ರನ್ ಗಳಿಸಿದ್ದು, ಚಹಾಲ್ ಬೌಲಿಂಗ್ ನಲ್ಲಿ ಔಟಾದರು.

ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ 65 ರನ್ ಗಳಿಸುವ ಮೂಲಕ ಅಜೇಯರಾಗಿ ಉಳಿದರು. ನಾಯಕ ಎಂ.ಎಸ್. ಧೋನಿ ಅಜೇಯ 19 ರನ್ ಗಳಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡ 2 ವಿಕೆಟ್ ನಷ್ಟಕ್ಕೆ 150ರನ್ ಗಳಿಸಿ ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.