Saturday, 4th January 2025

Chit Fund Scam: ಚಿಟ್‌ ಫಂಡ್‌ ಹಗರಣ; ಕ್ರಿಕೆಟಿಗ ಶುಭಮನ್‌ ಗಿಲ್‌ಗೆ ಸಂಕಷ್ಟ

ಅಹಮದಾಬಾದ್‌: 450 ಕೋಟಿ ಚಿಟ್‌ ಫಂಡ್‌ ಹಗರಣಕ್ಕೆ(Chit Fund Scam) ಸಂಬಂಧಿಸಿ ಟೀಮ್‌ ಇಂಡಿಯಾದ ಆಟಗಾರರಾದ ಶುಭಮನ್ ಗಿಲ್(Shubman Gill), ಮೋಹಿತ್ ಶರ್ಮಾ(Mohit Sharma), ರಾಹುಲ್ ತೆವಾಟಿಯಾ(Rahul Tewatia) ಮತ್ತು ಸಾಯಿ ಸುದರ್ಶನ್(Sai Sudharsan) ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇವರ ವಿರುದ್ಧ ಸಮನ್ಸ್ ಜಾರಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಹಗರಣದ ಪ್ರಮುಖ ರೂವಾರಿ ಭೂಪೇಂದರ್ ಸಿಂಗ್ ಝಾಲಾ ಅವರನ್ನು ಬಂಧಿಸಿ ತನಿಖೆಗೊಳಪಡಿಸಿದೆ. ಝಾಲಾ ನೇತೃತ್ವದ BZ ಫೈನಾನ್ಶಿಯಲ್ ಸರ್ವಿಸಸ್ ಹೆಸರಿನ ಕಂಪನಿ, ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿದರ ನೀಡುವುದಾಗಿ ಹೂಡಿಕೆದಾರರಿಗೆ ಭರವಸೆ ನೀಡಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿಸಿತ್ತು. ಆದರೆ ಹೂಡಿಕೆದಾರರಿಗೆ ಕೊನೆಯಲ್ಲಿ ನೀಡಬೇಕಾದ ಹಣವನ್ನು ನೀಡದೆ ವಂಚಿಸಿ ಮೋಸ ಮಾಡಿದ್ದಾನೆ. ಹೀಗಾಗಿ ಹೂಡಿಕೆದಾರರು ಪೊಲೀಸರಿಗೆ ದೂರು ನೀಡಿದ್ದರು.

ಗುಜರಾತ್​ನ ಹಲವು ಜಿಲ್ಲೆಗಳಲ್ಲಿ ತನ್ನ ಕಚೇರಿಯನ್ನು ತೆರೆದಿದ್ದ ಜತತೆ ತಲೋಡ್​, ಹಿಮ್ಮತ್​ನಗರ ಹಾಗೂ ವಡೋದರಾದಲ್ಲಿಯೂ ಕಚೇರಿಗಳಿದ್ದವು. ಹೂಡಿಕೆದಾರರನ್ನು ಸೆಳೆಯಲು ಹಲವು ಏಜೆಂಟ್​ಗಳನ್ನು ಕೂಡ ನೇಮಕ ಮಾಡಿಕೊಂಡಿದ್ದ. ಅಲ್ಲದೆ ಕ್ರಿಕಟಿಗರು ಹೂಡಿಕೆ ಮಾಡಿದ್ದಾರೆ ಎಂದು ಪ್ರಚಾರ ಮಾಡಿದ್ದ.

ಅಹಮದಾಬಾದ್ ಮಿರರ್ ವರದಿ ಪ್ರಕಾರ, ಶುಭ್​ಮನ್​ ಗಿಲ್, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಮತ್ತು ಮೋಹಿತ್ ಶರ್ಮಾ ಹಣ ಹೂಡಿಕೆ ಮಾಡಿದ್ದಾರೆ. ಈ ಕುರಿತು ಸಿಐಡಿ ಇದೀಗ ಈ ನಾಲ್ವರು ಕ್ರಿಕೆಟಿಗರನ್ನು ವಿಚಾರಣೆ ನಡೆಸಲಿದೆ. ವರದಿಯ ಪ್ರಕಾರ, ಗಿಲ್ 1.95 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರೆ, ಇತರ ಆಟಗಾರರು ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ಕೆಲ ಮೂಲಗಳ ಪ್ರಕಾರ ಗುಜರಾತ್ ಅಪರಾಧ ತನಿಖಾ ಇಲಾಖೆ ಆಟಗಾರರಿಗೆ ಸಮನ್ಸ್ ಕಳುಹಿಸಿದೆ ಎನ್ನಲಾಗಿದೆ. ಸದ್ಯ ಶುಭಮನ್‌ ಗಿಲ್‌ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿಯ ಭಾಗವಾಗಿ ಆಸ್ಟ್ರೇಲಿಯಾದಲ್ಲಿದ್ದಾರೆ.