ಸಿಡ್ನಿ: ಶುಕ್ರವಾರದಿಂದ(ಜ.3ರಿಂದ) ಸಿಡ್ನಿಯಲ್ಲಿ ಆರಂಭಗೊಳ್ಳಲಿರುವ ಭಾರತ ಮತ್ತು ಆಸ್ಟ್ರೇಲಿಯಾ(AUS vs IND) ನಡುವಣ ಅಂತಿಮ ಹಾಗೂ 5ನೇ ಟೆಸ್ಟ್ ಪಂದ್ಯ ಆಡಲಿದೆ. ಈ ಪಂದ್ಯವನ್ನು ಪಿಂಕ್ ಟೆಸ್ಟ್(pink test) ಪಂದ್ಯ ಎಂದು ಕರೆಯಲಾಗುತ್ತದೆ. ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರರು ಪಿಂಕ್ ಬಣ್ಣದ ಕ್ಯಾಪ್ ಧರಿಸಿ ಕಣಕ್ಕಿಳಿಯುತ್ತಾರೆ. ಆಸೀಸ್ ಮಾಜಿ ವೇಗಿ ಗ್ಲೆನ್ ಮೆಕ್ಗ್ರಾಥ್ ಫೌಂಡೇಶನ್ಗೆ ಸಹಾಯ ಮಾಡುವ ಉದ್ದೇಶದಿಂದ ಈ ಟೆಸ್ಟ್ ಪಂದ್ಯವನ್ನು ಆಯೋಜಿಸಲಾಗಿದೆ.
2009 ರಿಂದ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಪ್ರತಿ ಹೊಸ ವರ್ಷದ ಮೊದಲ ಟೆಸ್ಟ್ ಪಂದ್ಯವನ್ನು ಪಿಂಕ್ ಟೆಸ್ಟ್ ಎನ್ನಲಾಗುತ್ತಿದೆ. ಈ ಪಿಂಕ್ ಬಾಲ್ ಟೆಸ್ಟ್ ಸರಣಿಯನ್ನು ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮ್ಯಾಕ್ ಗ್ರಾತ್ ಫೌಂಡೇಶನ್ ಆಯೋಜಿಸಿತ್ತು. 2008 ರಲ್ಲಿ ಮ್ಯಾಕ್ ಗ್ರಾತ್‌ರವರ ಪತ್ನಿ ಜೇನ್ ಅವರು ಸ್ತನ ಕ್ಯಾನ್ಸರ್‌ನಿಂದ ನಿಧನರಾದರು. ಆ ನಿಟ್ಟಿನಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಟೆಸ್ಟ್ ಸರಣಿಯನ್ನು ಆಯೋಜಿಸುತ್ತ ಬಂದಿದೆ. ಈ ಪಂದ್ಯದಲ್ಲಿ ಆಟಗಾರರು ಧರಿಸಿದ ಪಿಂಕ್ ಕ್ಯಾಪ್ ಹರಾಜಾಗಿಡಲಾಗುತ್ತದೆ. ಇದರಿಂದ ಬಂದ ಹಣವನ್ನು ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುತ್ತದೆ.
ಟೂರ್ನಿಯಲ್ಲಿ 1-2ರ ಹಿನ್ನಡೆಯಲ್ಲಿರುವ ಭಾರತ ಸರಣಿ ಸೋಲನ್ನು ತಪ್ಪಿಸಬೇಕಿದ್ದರೆ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಜತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸುವ ಕ್ಷೀಣ ಅವಕಾಶವೊಂದನ್ನು ಹೊಂದಿರುವ ಕಾರಣ ಈ ಪಂದ್ಯವನ್ನೇ ಗೆಲ್ಲಲೇ ಬೇಕು.
ಡಬ್ಲ್ಯೂಟಿಸಿ ಫೈನಲ್ ಗೆ ಅರ್ಹತೆ ಪಡೆಯಲು, ಭಾರತವು ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯವನ್ನು ಗೆಲ್ಲಬೇಕು. ಮತ್ತೊಂದೆಡೆ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ ಎರಡು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-0 ಅಂತರದಿಂದ ಸೋಲಬೇಕು ಹಾಗಾದರೆ ಭಾರತ ಫೈನಲ್ ಪ್ರವೇಶಿಸುವ ಅವಕಾಶವಿದೆ. ಸದ್ಯ ಭಾರತ 55.89 ಪಿಸಿಟಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 58.89 ರೊಂದಿಗೆ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಈಗಾಗಲೇ ಫೈನಲ್ ಪ್ರವೇಶಿಸಿದೆ.
ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಗೆಲುವಿಗಾಗಿ ಭಾರಿ ಪೈಪೋಟಿ ನಡೆದಿತ್ತು. ಆದರೆ, ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡ, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರುವ ಮೂಲಕ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಅದರಲ್ಲಿಯೂ ವಿಶೇಷವಾಗಿ ಆಲ್‌ರೌಂಡರ್ ಪ್ರದರ್ಶನ ತೋರಿದ ಪ್ಯಾಟ್ ಕಮಿನ್ಸ್ ಎರಡೂ ಇನಿಂಗ್ಸ್‌ಗಳಿಂದ 90 ರನ್ ಹಾಗೂ 6 ವಿಕೆಟ್‌ಗಳನ್ನು ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.