Sunday, 8th September 2024

ಡೆಲ್ಲಿಗೆ ಆರನೇ ಸೋಲು, ಚೆನ್ನೈ ಪ್ಲೇ-ಆಫ್ ಕನಸು ಜೀವಂತ

ಮುಂಬೈ: ಆರಂಭಿಕ ಡೆವೊನ್ ಕಾನ್ವೆ ಬಿರುಸಿನ ಅರ್ಧಶತಕ (87) ಮತ್ತು ಬೌಲರ್‌ಗಳ ನಿಖರ ದಾಳಿಯ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಐಪಿಎಲ್ 2022 ಟೂರ್ನಿಯಲ್ಲಿ 91 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ, ಡೆವೊನ್ ಕಾನ್ವೆ ಹಾಗೂ ಋತುರಾಜ್ ಗಾಯಕವಾಡ್ ಶತಕದ ಜೊತೆಯಾಟದ ಬೆಂಬಲದಿಂದ ಆರು ವಿಕೆಟ್ ನಷ್ಟಕ್ಕೆ 208 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.

ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಡೆಲ್ಲಿ 17.4 ಓವರ್‌ಗಳಲ್ಲಿ 117 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಇದರೊಂದಿಗೆ ನಾಲ್ಕನೇ ಗೆಲುವು ದಾಖಲಿಸಿರುವ ಮಹೇಂದ್ರ ಸಿಂಗ್ ಧೋನಿ ಪಡೆ, ಒಟ್ಟು ಎಂಟು ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೇರಿದೆ. ಈ ಮೂಲಕ ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿದೆ. ಡೆಲ್ಲಿ 11 ಪಂದ್ಯಗಳಲ್ಲಿ ಆರನೇ ಸೋಲಿಗೆ ಶರಣಾಗಿದ್ದು, ಐದನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಅಲ್ಲದೆ ಪ್ಲೇ-ಆಫ್ ಸಾಧ್ಯತೆ ಮತ್ತಷ್ಟು ಕಠಿಣವೆನಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಚೆನ್ನೈಗೆ ಡೆವೊನ್ ಕಾನ್ವೆ ಹಾಗೂ ಋತುರಾಜ್ ಗಾಯಕವಾಡ್ ಮಗದೊಮ್ಮೆ ಅತ್ಯುತ್ತಮ ಆರಂಭವೊದಗಿಸಿ ದರು. ಈ ಜೋಡಿ ಮೊದಲ ವಿಕೆಟ್‌ಗೆ 11 ಓವರ್‌ಗಳಲ್ಲಿ 110 ರನ್‌ಗಳ ಜೊತೆಯಾಟ ನೀಡಿ ಭದ್ರ ಅಡಿಪಾಯ ಹಾಕಿಕೊಟ್ಟರು.

ಕೊನೆಯ ಹಂತದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ 8 ಎಸೆತಗಳಲ್ಲಿ ಅಜೇಯ 21 ರನ್ ಗಳಿಸಿ (2 ಸಿಕ್ಸರ್, 1 ಬೌಂಡರಿ) ಗಮನ ಸೆಳೆದರು. ಈ ಮೂಲಕ ಸಿಎಸ್‌ಕೆ ಆರು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು. ಡೆಲ್ಲಿ ಪರ ಎನ್ರಿಚ್ ನಾಕಿಯಾ ಮೂರು ಹಾಗೂ ಖಲೀಲ್ ಅಹ್ಮದ್ ಎರಡು ವಿಕೆಟ್ ಗಳಿಸಿದರು.

error: Content is protected !!