Tuesday, 10th December 2024

9ನೇ ಬಾರಿಗೆ ಫೈನಲ್ ಪ್ರವೇಶಿಸಿದ ಚೆನ್ನೈ, ಕೊನೆಯಲ್ಲಿ ಸಿಡಿದ ಧೋನಿ

ದುಬೈ: ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅಬ್ಬರದ ಬ್ಯಾಟಿಂಗ್ ಮಾಡಿ 6 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 3 ಬೌಂಡರಿ ಬಾರಿಸುವ ಮೂಲಕ ಡೆಲ್ಲಿ ತಂಡವನ್ನು 4 ವಿಕೆಟ್ ಗಳಿಂದ ಮಣಿಸಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ತಂಡ 9ನೇ ಬಾರಿಗೆ ಫೈನಲ್ ಪ್ರವೇಶಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್ ಗೆ 172 ರನ್ ಗಳಿಸಿತು. ಆರಂಭಿಕ ಪೃಥ್ವಿ ಶಾ (60 ರನ್) ಮತ್ತು ನಾಯಕ ರಿಷಭ್ ಪಂತ್ (ಅಜೇಯ 51) ಗಳಿಸಿದ ಅರ್ಧ ಶತಕ ಗಳಿಸಿದ್ದರು. ಉತ್ತರವಾಗಿ ಚೆನ್ನೈ 19.4 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಡೆಲ್ಲಿ ಪರ ಅಕ್ಷರ್ ಪಟೇಲ್ 10, ಶಿಮ್ರಾನ್ ಹೆಟ್ಮರ್ 37 ರನ್ ಗಳಿಸಿದ್ದಾರೆ. ಚೆನ್ನೈ ಪರ ಬೌಲಿಂಗ್ ನಲ್ಲಿ ಹೆಜಲ್ವುಡ್ 2, ಜಡೇಜಾ, ಮೋಯಿನ್ ಅಲಿ ಮತ್ತು ಬ್ರಾವೋ ತಲಾ 1 ವಿಕೆಟ್ ಪಡೆದಿದ್ದಾರೆ. ಚೆನ್ನೈ ಪರ ಬ್ಯಾಟಿಂಗ್ ನಲ್ಲಿ ರುತುರಾಜ್ ಗಾಯಕ್ವಾಡ್ 70, ರಾಬಿನ್ ಉತ್ತಪ್ಪ 63, ಮೋಯಿನ್ ಅಲಿ 16 ಮತ್ತು ಎಂಎಸ್ ಧೋನಿ ಅಜೇಯ 18 ರನ್ ಬಾರಿಸಿದ್ದಾರೆ.

ಅದೇ ಮೈದಾನದಲ್ಲಿ ಚೆನ್ನೈ ತಂಡ ಅ.15ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನಡುವಿನ ಎಲಿಮಿನೇಟರ್ ವಿಜೇತರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಎರಡನೇ ಕ್ವಾಲಿಫೈಯರ್ ವಿಜೇತರೊಂದಿಗೆ ಫೈನಲ್ ಆಡಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಮೊದಲ ಕ್ವಾಲಿಫೈಯರ್ ಹಣಾಹಣಿಯ ಕಡೇ ಓವರ್‌ನಲ್ಲಿ ಜಯಿಸಲು 13 ರನ್ ಅವಶ್ಯಕತೆಯಿದ್ದಾಗ ನಾಯಕ ಎಂಎಸ್ ಧೋನಿ (18*ರನ್, 6 ಎಸೆತ, 3 ಬೌಂಡರಿ, 3 ಬೌಂಡರಿ, 1 ಸಿಕ್ಸರ್) 3 ಬೌಂಡರಿ ಸಿಡಿಸಿದರು.

ಡೆಲ್ಲಿ ತಂಡ ಸೋತರೂ ಫೈನಲ್‌ಗೇರಲು ಇನ್ನೊಂದು ಅವಕಾಶವಿದ್ದು, ಆರ್‌ಸಿಬಿ-ಕೆಕೆಆರ್ ನಡುವಿನ ವಿಜೇತರನ್ನು ಬುಧವಾರ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಎದುರಿಸಲಿದೆ.

ಚೆನ್ನೈ ತಂಡ ಟೂರ್ನಿಯಲ್ಲಿ 3 ಬಾರಿ ಚಾಂಪಿಯನ್ ಆಗಿದ್ದರೆ, 5 ಬಾರಿ ರನ್ನರ್ ಅಪ್ ಆಗಿದೆ.

ಡೆಲ್ಲಿ ಕ್ಯಾಪಿಟಲ್ಸ್: 5 ವಿಕೆಟ್‌ಗೆ 172

ಸಿಎಸ್‌ಕೆ: 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 173