Thursday, 12th December 2024

ಚೆನ್ನೈಗೆ ಆಂಬಟಿ ರಾಯುಡು ಬಲ: ವಾರ್ನರ್‌ ಪಡೆ ಸವಾಲು ಇಂದು

ದುಬೈ: ಕಡೆಗೂ ಅಂಬಟಿ ರಾಯುಡು ಶುಕ್ರವಾರದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಇದರಿಂದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಬಲ ಹೆಚ್ಚಲಿದೆ.

ಎರಡು ದಿನಗಳ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಜಯಿಸಿದ್ದ ಡೇವಿಡ್ ವಾರ್ನರ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಚೆನ್ನೈಗೆ ಸವಾಲೊಡ್ಡಲಿದೆ.

ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಚೆನ್ನೈ ಜಯ ಗಳಿಸಲು ಅಂಬಟಿಯ ಅರ್ಧಶತಕದ ಆಟ ನೆರವಾಗಿತ್ತು. ಗಾಯದಿಂದಾಗಿ ನಂತರದ ಎರಡು ಪಂದ್ಯಗಳಲ್ಲಿ ಅವರು ವಿಶ್ರಾಂತಿ ಪಡೆದಿದ್ದರು. ಈ ಸಂದರ್ಭದಲ್ಲಿ ಸುರೇಶ್ ರೈನಾ ಅನುಪಸ್ಥಿತಿಯೂ ಕಾಡಿತ್ತು. ಇದೀಗ ಬ್ರಾವೊ ಕೂಡ ಫಿಟ್ ಆಗಿದ್ದಾರೆ.

ಸನ್‌ರೈಸರ್ಸ್ ತಂಡದಲ್ಲಿ ಕಳೆದ ಪಂದ್ಯದಲ್ಲಿ ಅವಕಾಶ ಗಳಿಸಿದ ಕೇನ್ ವಿಲಿಯಮ್ಸನ್ ಉತ್ತಮವಾಗಿ ಆಡಿದ್ದರು. ತಂಡದ ಗೆಲುವಿಗೆ ಕಾಣಿಕೆ ನೀಡಿದ್ದರು. ಡೇವಿಡ್ ವಾರ್ನರ್, ಜಾನಿ ಬೆಸ್ಟೊ, ಕರ್ನಾ ಟಕದ ಮನೀಷ್ ಪಾಂಡೆ, ವೃದ್ಧಿಮಾನ್ ಸಹಾ ಬ್ಯಾಟಿಂಗ್ ಬಲ ಹೆಚ್ಚಿಸಬಲ್ಲರು. ಭುವನೇಶ್ವರ್ ಕುಮಾರ್, ಖಲೀಲ್ ಅಹಮದ್ ಮತ್ತು ಸ್ಪಿನ್ನರ್ ರಶೀದ್ ಖಾನ್ ಪಂದ್ಯ ಗೆಲ್ಲಿಸಿ ಕೊಡುವ ಸಮರ್ಥರು.

ಫಾಫ್ ಡುಪ್ಲೆಸಿ, ಶೇನ್ ವಾಟ್ಸನ್, ರವೀಂದ್ರ ಜಡೇಜಾ ಇಲ್ಲಿಯೂ ತಮ್ಮ ಆಟ ಮುಂದುವರಿಸುವ ನಿರೀಕ್ಷೆ ಇದೆ. ಅಂಬಟಿ ಮರಳುವು ದರಿಂದ ಕೇದಾರ್ ಬೆಂಚ್‌ ಕಾಯಿಸಬೇಕಾಗಬಹುದು.