Sunday, 8th September 2024

ಸಿಎಸ್‌ಕೆ ರೋಚಕ ಗೆಲುವು, ಪ್ಲೇಆಫ್ ಗ್ಯಾರಂಟಿ

ಅಬುಧಾಬಿ: ಕುತೂಹಲ ಕಾಯ್ದುಕೊಂಡ ಕದನದಲ್ಲಿ ಮೇಲುಗೈ ಸಾಧಿಸಿದ ಮೂರು ಬಾರಿ ಚಾಂಪಿಯನ್ ತಂಡ ಸಿಎಸ್‌ಕೆ ಐಪಿಎಲ್-14ರ ಎರಡನೇ ಭಾಗದಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಪ್ಲೇಆಫ್ ಹಂತವನ್ನು ಖಾತ್ರಿಪಡಿಸಿಕೊಂಡಿತು.

ಭಾನುವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆ ತಂಡ 2 ವಿಕೆಟ್‌ಗಳಿಂದ ಕೆಕೆಆರ್ ತಂಡದೆದುರು ರೋಚಕ ಗೆಲುವು ದಾಖಲಿಸಿತು. ಈ ಗೆಲುವಿ ನೊಂದಿಗೆ ಸಿಎಸ್‌ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಕೆಕೆಆರ್ ತಂಡ ಆಸೆ ತೂಗುಯ್ಯಲೆಯಲ್ಲಿ ಉಳಿಯಿತು.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್, ರಾಹುಲ್ ತ್ರಿಪಾಠಿ (44ರನ್) ಹಾಗೂ ನಿತೀಶ್ ರಾಣಾ (37*ರನ್, 27 ಎಸೆತ, 3 ಬೌಂಡರಿ, 1 ಸಿಕ್ಸರ್) ಜೋಡಿಯ ಬಿರುಸಿನ ಬ್ಯಾಟಿಂಗ್ ಫಲವಾಗಿ 6 ವಿಕೆಟ್‌ಗೆ 171 ರನ್ ಕಲೆ ಹಾಕಿತು. ಪ್ರತಿಯಾಗಿ ಸಂಘ ಟಿತ ಬ್ಯಾಟಿಂಗ್ ನೆರವಿನಿಂದ ಸಿಎಸ್‌ಕೆ ತಂಡ 8 ವಿಕೆಟ್‌ಗೆ 172 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ಕೆಕೆಆರ್ ತಂಡ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಸಿಎಸ್‌ಕೆ ತಂಡಕ್ಕೆ ಅಗ್ರಕ್ರಮಾಂಕ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭ ನೀಡಿದರು. ಸುನೀಲ್ ನಾರಾಯಣ್ (41ಕ್ಕೆ 3) ನೀಡಿದ ಆಘಾತದಿಂದಾಗಿ ಸಿಎಸ್‌ಕೆ ದಿಢೀರ್ ಕುಸಿತ ಕಂಡಿತು. ಕಡೇ 2 ಓವರ್‌ಗಳಲ್ಲಿ ಸಿಎಸ್‌ಕೆ ಗೆಲುವಿಗೆ 26 ರನ್ ಅವಶ್ಯಕತೆಯಿದ್ದಾಗ 19ನೇ ಓವರ್ ದಾಳಿಗಿಳಿದ ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ 22 ರನ್ ಬಿಟ್ಟು ಕೊಡುವ ಮೂಲಕ ದುಬಾರಿಯಾದರು. ಕಡೇ ಓವರ್‌ನಲ್ಲಿ 4 ರನ್ ಬೇಕಿದ್ದಾಗ ದಾಳಿಗಿಳಿದ ಸುನೀಲ್ ನಾರಾಯಣ್, ಮೊದಲ ಎಸೆತದಲ್ಲಿ ಸ್ಯಾಮ್ ಕರ‌್ರನ್ ವಿಕೆಟ್ ಪಡೆದರೆ, 3ನೇ ಎಸೆತದಲ್ಲಿ ಶಾರ್ದೂಲ್ ಮೂರು ರನ್ ಕಸಿದು ಪಂದ್ಯವನ್ನು ಸಮಬಲಕ್ಕೆ ನಿಲ್ಲಿಸಿದರು. 4ನೇ ಎಸೆತದಲ್ಲಿ ರನ್ ಗಳಿಸದ ಜಡೇಜಾ, 5ನೇ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಕಡೇ ಎಸೆತದಲ್ಲಿ ದೀಪಕ್ ಚಹರ್ ಒಂಟಿ ರನ್ ತಂದು ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.

ಸಿಎಸ್‌ಕೆ ತಂಡ ಚೇಸಿಂಗ್‌ನಲ್ಲಿ 3 ಬಾರಿ ಕೆಕೆಆರ್ ವಿರುದ್ಧ ಕಡೇ ಎಸೆತದಲ್ಲಿ ಗೆಲುವು ಕಂಡಿತು. ಇದಕ್ಕೂ ಮೊದಲು 2012, 2020ರಲ್ಲಿ ಈ ಸಾಧನೆ ಮಾಡಿತ್ತು.

ಸಿಎಸ್‌ಕೆ ತಂಡ ಚೇಸಿಂಗ್‌ನಲ್ಲಿ 7ನೇ ಬಾರಿ ಕಡೆ ಎಸೆತದಲ್ಲಿ ಗೆಲುವು ಕಂಡಿತು. ಇದರೊಂದಿಗೆ ಅತಿಹೆಚ್ಚು ಬಾರಿ ಕಡೇ ಎಸೆತದಲ್ಲಿ ಗೆಲುವು ಕಂಡ ತಂಡ ಎನಿಸಿಕೊಂಡಿತು. ಮುಂಬೈ (6) ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿತು.

ಕೆಕೆಆರ್ ತಂಡ, ಡಿಫೆಂಡಿಂಗ್ ವೇಳೆ 6ನೇ ಬಾರಿಗೆ ಕಡೇ ಎಸೆತದಲ್ಲಿ ಸೋಲು ಕಂಡಿತು. ಮುಂಬೈ (5) ಹೆಸರಿನಲ್ಲಿದ್ದ ಅನಾಪೇಕ್ಷಿತ ದಾಖಲೆಯನ್ನು ಹಿಂದಿಕ್ಕಿತು.

Leave a Reply

Your email address will not be published. Required fields are marked *

error: Content is protected !!