Monday, 30th December 2024

D Gukesh: ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ಕೊಟ್ಟ ವಿಶ್ವ ಚಾಂಪಿಯನ್‌ ಗುಕೇಶ್‌

ನವದೆಹಲಿ: ನೂತನ ವಿಶ್ವ ಚೆಸ್​ ಚಾಂಪಿಯನ್​, ಭಾರತದ ಡಿ.ಗುಕೇಶ್‌(D Gukesh) ಅವರು ನವದೆಹಲಿಯಲ್ಲಿ ನರೇಂದ್ರ ಮೋದಿ(PM Narendra Modi) ಅವರನ್ನು ಭೇಡಿ ಮಾಡಿದ್ದಾರೆ. ಈ ವೇಳೆ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ಚೆಸ್‌ ಬೋರ್ಡ್‌ ಅನ್ನು ಮೋದಿಗೆ ಗುಕೇಶ್‌ ಉಡುಗೊರೆಯಾಗಿ ನೀಡಿದ್ದಾರೆ. ಗುಕೇಶ್‌ ತಂದೆ ಡಾ.ರಜನಿಕಾಂತ್‌ ಮತ್ತು ತಾಯಿ ಪದ್ಮಾವತಿ ಕೂಡ ಹಾಜರಿದ್ದರು.

18 ವರ್ಷದ ಗುಕೇಶ್ ಅವರು ಇತ್ತೀಚೆಗೆ ಸಿಂಗಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಚೀನಾದ ಡಿಂಗ್ ಲಿರೇನ್ ವಿರುದ್ಧ ಗೆದ್ದು ದಾಖಲೆ ಬರೆದಿದ್ದರು. ಗುಕೇಶ್‌ ಭೇಟಿಯ ಬಗ್ಗೆ ಟ್ವಿಟರ್‌ ಎಕ್ಸ್‌ನಲ್ಲಿ ಸಂತಸ ವ್ಯಕ್ತಪಡಿಸಿರುವ ಮೋದಿ, ‘ನಾನು ಕೆಲವು ವರ್ಷಗಳಿಂದ ಗುಕೇಶ್‌ ಅವರೊಂದಿಗೆ ನಿಕಟವಾಗಿ ಸಂವಹನ ನಡೆಸುತ್ತಿದ್ದೇನೆ ಮತ್ತು ಅವರ ಸಾಧನೆ ಬಗ್ಗೆ ನನಗೆ ಹೆಮ್ಮೆ ಇದೆ. ಅವರ ಆತ್ಮವಿಶ್ವಾಸ ನಿಜಕ್ಕೂ ಸ್ಪೂರ್ತಿದಾಯಕ. ವಾಸ್ತವವಾಗಿ, ಅವರು ಕೆಲವು ವರ್ಷಗಳ ಹಿಂದೆ ಕಿರಿಯ ವಿಶ್ವ ಚಾಂಪಿಯನ್ ಆಗುತ್ತೇನೆ ಎಂದು ಎಂದು ಹೇಳಿದ್ದ ವಿಡಿಯೊವನ್ನು ನಾನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ. ಅವರು ಕನಸು ಕಂಡಂತೆ ಅತಿ ಕಿರಿಯ ವಯಸ್ಸಿನಲ್ಲೇ ವಿಶ್ವ ಚೆಸ್​ ಚಾಂಪಿಯನ್ ಆಗಿದ್ದಾರೆ. ಇದು ಅವರ ಛಲ ಮತ್ತು ದೃಢ ಸಂಕಲ್ಪವನ್ನು ತೋರಿಸುತ್ತದೆ’ ಎಂದು ಮೋದಿ ಬರೆದುಕೊಂಡಿದ್ದಾರೆ.

ಗುಕೇಶ್​ 2006ರ ಮೇ 29ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿ ಅಲ್ಲೇ ಬೆಳೆದಿದ್ದರೂ, ಅವರ ಮಾತೃಭಾಷೆ ತೆಲುಗು. ಯಾಕೆಂದರೆ ಅವರ ಕುಟುಂಬದ ಮೂಲ ಆಂಧ್ರ ಪ್ರದೇಶದ ಗೋದಾವರಿ ಆಗಿದೆ.

ಇದನ್ನೂ ಓದಿ ಐಸಿಸಿ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕನ್ನಡತಿ ಶ್ರೇಯಾಂಕಾ ನಾಮನಿರ್ದೇಶನ

ಗುಕೇಸ್​ ಎಂದರೆ ಸದ್ಗುಣ, ಶಿವ ಅಥವಾ ಜಗತ್ತನ್ನೇ ಗೆದ್ದವನು ಎಂದರ್ಥ. ಮಗನಿಗೆ ‘ಜಿ’ ಅಥವಾ ‘ಗು’ ನಿಂದ ಆರಂಭವಾಗುವ ಅಕ್ಷರದ ಹೆಸರಿಡಲು ಜ್ಯೋತಿಷಿ ಸೂಚಿಸಿದ್ದರಂತೆ, ಅದರಂತೆ ಅವರ ಪೋಷಕರು ಈ ವಿಶೇಷ ಹೆಸರನ್ನು ಆಯ್ದುಕೊಂಡರಂತೆ. ಅವರ ಪೂರ್ಣ ಹೆಸರು ದೊಮ್ಮರಾಜು ಗುಕೇಶ್. ಮಗನ ಚೆಸ್​ ಕನಸು ನನಸಾಗಿಸುವ ಸಲುವಾಗಿ ತಂದೆ ರಜನಿಕಾಂತ್​ ವೈದ್ಯ ವೃತ್ತಿಯನ್ನೇ ತೊರೆದು ಮಗನೊಂದಿಗೆ ವಿವಿಧ ಚೆಸ್​ ಟೂರ್ನಿಗಳಿಗೆ ಪ್ರಯಾಣಿಸಲಾರಂಭಿಸಿದ್ದರು. ಮಗನ ಎಲ್ಲ ಸಾಧನೆಗೂ ತಂದೆ ಬೆನ್ನುಲುಬಾಗಿ ನಿಂತಿದ್ದಾರೆ.