Thursday, 12th December 2024

ಇಂದಿನಿಂದ ಭಾರತ-ಇಂಗ್ಲೆಂಡ್ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಆರಂಭ

ಅಹಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಮೂರನೇ ಟೆಸ್ಟ್ ಪಂದ್ಯ ಮೊಟೇರಾದ ಕ್ರಿಕೆಟ್ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ ಆರಂಭಗೊಳ್ಳಲಿದೆ.

ಉಭಯ ತಂಡಗಳು ತಲಾ ಒಂದು ಪಂದ್ಯಗಳಲ್ಲಿ ಜಯ ಗಳಿಸಿ ಸರಣಿಯಲ್ಲಿ 1-1 ಸಮಬಲ ಸಾಧಿ ಸಿವೆೆ. ವಿಶ್ವ ಟೆಸ್ಟ್ ಚಾಂಪಿಯನ್ ‌ಶಿಪ್‌ನ ಫೈನಲ್‌ನಲ್ಲಿ ಅವಕಾಶ ದೃಢಪಡಿಸಲು ಭಾರತ ಮತ್ತು ಇಂಗ್ಲೆಂಡ್ ತಂಡಗಳಿಗೆ ಮುಂದಿನ ಎರಡು ಟೆಸ್ಟ್ ಪಂದ್ಯಗಳು ನಿರ್ಣಾಯಕವಾಗಿವೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸ್ಥಾನವನ್ನು ಗಳಿಸಲು ಭಾರತ ಹೋರಾಡಬೇಕಿದೆ. ಮುಂದಿನ ಎರಡು ಟೆಸ್ಟ್‌ಗಳನ್ನು ಭಾರತ ಕಳೆದುಕೊಂಡರೆ ಭಾರತದ ಫೈನಲ್ ಕನಸು ಕಮರಿ ಹೋಗಲಿದೆ.

ಇದುವರೆಗೆ ಭಾರತದ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಸಾಧಿಸಿದಂತೆ ಕಾಣಿಸದಿದ್ದರೂ, ಭಾರತದ ಅಗ್ರ ಆರು ಆಟಗಾರರು ಸರಣಿಯಲ್ಲಿ ಕನಿಷ್ಠ 50 ಕ್ಕಿಂತ ಹೆಚ್ಚು ಸ್ಕೋರ್ ದಾಖಲಿಸಿದ್ದಾರೆ. ಎರಡನೇ ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ಶತಕ ದಾಖಲಿಸಿದಂತೆ ತಂಡದ ಪ್ರಬಲ ಬ್ಯಾಟಿಂಗ್ ಮುಂದಿನ ಪಂದ್ಯಗಳಲ್ಲಿ ಅನಾವರಣಗೊಳ್ಳಲಿದೆ.

ಭಾರತದ ಪರವಾಗಿರುವ ಇನ್ನೊಂದು ವಿಷಯವೆಂದರೆ ಪ್ರಬಲ ಬೌಲಿಂಗ್ ದಾಳಿಯನ್ನು ಭಾರತ ಕಣಕ್ಕಿಳಿಸಿದೆ. ಒಂದು ಟೆಸ್ಟ್ ವಿರಾಮದ ನಂತರ ಜಸ್‌ಪ್ರೀತ್ ಬುಮ್ರಾ ಮತ್ತೆ ತಂಡಕ್ಕೆ ಮರಳಿದ್ದಾರೆ. ಇಶಾಂತ್ ಶರ್ಮಾ ಅವರೊಂದಿಗೆ ವೇಗದ ದಾಳಿಯ ವಿಭಾಗವನ್ನು ಮುನ್ನಡೆಸಲಿದ್ದಾರೆ. ಆರ್.ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಸ್ಪಿನ್ ವಿಭಾಗವನ್ನು ನಿರ್ವಹಿಸುತ್ತಿದ್ದಾರೆ. ಕುಲದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ಉಮೇಶ್ ಯಾದವ್ ಮತ್ತು ಮುಹಮ್ಮದ್ ಸಿರಾಜ್ ಇವರಲ್ಲಿ ಐದನೇ ಬೌಲರ್ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ.

ಕೊಹ್ಲಿ ಪಿತೃತ್ವ ರಜೆಯಲ್ಲಿ ಆಸ್ಟ್ರೇಲಿಯದಿಂದ ಹೊರಡುವ ಮೊದಲು ಅಡಿಲೇಡ್‌ನಲ್ಲಿ ಹಗಲು-ರಾತ್ರಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 74 ರನ್ ಗಳಿಸಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಟೆಸ್ಟ್‌ನ ಐದನೇ ದಿನದಂದು 72ರನ್ ಗಳಿಸಿದ್ದರು. ಎರಡನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ 62 ರನ್ ಗಳಿಸಿರುವುದು ಭಾರತಕ್ಕೆ ಇಂಗ್ಲೆಂಡ್‌ನ ಬಾಗಿಲು ಮುಚ್ಚಲು ಸಹಾಯ ಮಾಡಿತು.

ಸಂಭಾವ್ಯ ತಂಡ

ಭಾರತ : ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶುಬ್‌ಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ಆರ್.ಅಶ್ವಿನ್, ಅಕ್ಷರ್ ಪಟೇಲ್, ಇಶಾಂತ್ ಶರ್ಮಾ,ಉಮೇಶ್ ಯಾದವ್ , ಜಸ್‌ಪ್ರೀತ್ ಬುಮ್ರಾ

ಇಂಗ್ಲೆಂಡ್: ಜೋ ರೂಟ್, ಡೊಮ್ ಸಿಬ್ಲಿ, ಝಕ್ ಕ್ರಾಲೆ, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್, ಒಲ್ಲಿ ಪೋಪ್, ಬೆನ್ ಫೋಕ್ಸ್ (ವಿಕೆಟ್ ಕೀಪರ್), ಡೊಮ್ ಬೆಸ್ / ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್, ಜಾಕ್ ಲೀಚ್, ಜೇಮ್ಸ್ ಆಯಂಡರ್ಸನ್

ಮೊಟೇರಾ ಪಿಚ್ ಹಸಿರು ಹುಲ್ಲಿನಿಂದಾವೃತವಾಗಿದೆ. 1,10,000 ಪ್ರೇಕ್ಷಕರಿಗೆ ಆಸನ ಸಾಮರ್ಥ್ಯವನ್ನು ಹೊಂದಿದೆ.

2019ರಲ್ಲಿ ಈಡನ್ ಗಾರ್ಡನ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧ ಭಾರತದ ಮೊದಲ ಹಗಲು-ರಾತ್ರಿ ಟೆಸ್ಟ್‌ನಲ್ಲಿ ಕೊಹ್ಲಿ ಶತಕ ಸಿಡಿಸಿದ್ದರು.

ಇಶಾಂತ್ ಶರ್ಮಾರಿಗೆ 100ನೇ ಟೆಸ್ಟ್ ಆಗಿರುತ್ತದೆ. ಭಾರತದ ವೇಗದ ಬೌಲರ್‌ಗಳ ಪೈಕಿ ಕಪಿಲ್ ದೇವ್ ಮಾತ್ರ ಹೆಚ್ಚು ಟೆಸ್ಟ್ ಆಡಿದ್ದಾರೆ (131).

ಭಾರತ ಮೂರನೇ ಪಿಂಕ್ ಬಾಲ್ ಟೆಸ್ಟ್ ಆಡುತ್ತಿದೆ. ಭಾರತದಲ್ಲಿ ನಡೆದ ಟೆಸ್ಟ್‌ನಲ್ಲಿ ಭಾರತ ಜಯ ಗಳಿಸಿತ್ತು. ಆಸ್ಟ್ರೇಲಿಯದಲ್ಲಿ ನಡೆದ ಟೆಸ್ಟ್‌ನಲ್ಲಿ ಸೋಲು ಅನುಭವಿಸಿತ್ತು.