Friday, 22nd November 2024

ಅಗ್ರಸ್ಥಾನಕ್ಕಾಗಿ ಫೈಟ್: ಡೆಲ್ಲಿ ಕ್ಯಾಪಿಟಲ್ಸ್’ಗೆ ಮೂರು ವಿಕೆಟ್ ಗೆಲುವು

ದುಬೈ: ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಮೂರು ವಿಕೆಟ್ ಅಂತರದಿಂದ ಗೆಲುವು ದಾಖಲಿಸಿ, ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ಚೆನ್ನೈ ಪರ ಆರಂಭಿಕರಾದ ರುತುರಾಜ್ ಗಾಯಕ್ ವಾಡ್ 13, ಫಾಪ್ ಡು ಪ್ಲೆಸಿಸ್ 10, ರಾಬಿನ್ ಉತ್ತಪ್ಪ 19, ಮೊಯಿನ್ ಆಲಿ 5, ಅಂಬಟಿ ರಾಯುಡು 55, ನಾಯಕ ಮಹೇಂದ್ರ ಸಿಂಗ್ ಧೋನಿ 18 ಹಾಗೂ ರವೀಂದ್ರ ಜಡೇಜಾ 1 ರನ್ ಕಲೆ ಹಾಕಿದರು. ಇದರೊಂದಿಗೆ ಸಿಎಸ್ ಕೆ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿತು.

ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಪೃಥ್ವಿ ಶಾ 18, ಶಿಖರ್ ಧವನ್ 39, ಶ್ರೇಯಸ್ ಅಯ್ಯರ್ 2, ರಿಷಭ್ ಪಂತ್ 15, ರಿಪಾಲ್ ಪಟೇಲ್ 18, ಆರ್ ಅಶ್ವಿನ್ 2, ಶಿಮ್ರೊನ್ ಹೆಟ್ಮೆಯರ್ ಅಜೇಯ 28, ಅಕ್ಷರ್ ಪಟೇಲ್ 5, ರಾಬಡ ಅಜೇಯ 4 ರನ್ ಕಲೆ ಹಾಕುವುದರೊಂದಿಗೆ 19-4 ಓವರ್ ಗಳಲ್ಲಿ ಏಳು ವಿಕೆಟ್ ಗೆ 139 ರನ್ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ನಗೆ ಬೀರಿತು. ಅಕ್ಷರ್ ಪಟೇಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಟೂರ್ನಿಯಲ್ಲಿ 4ನೇ ಸೋಲು ಕಂಡ ಎಂಎಸ್ ಧೋನಿ ಬಳಗ ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿಯಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಸಿಎಸ್‌ಕೆ ತಂಡವನ್ನು ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ (18ಕ್ಕೆ 2) ಮತ್ತು ಆರ್. ಅಶ್ವಿನ್ (20ಕ್ಕೆ 1) ಕಾಡಿದರು. ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು (55*ರನ್, 43 ಎಸೆತ, 5 ಬೌಂಡರಿ, 2 ಸಿಕ್ಸರ್) ಆಸರೆಯಿಂದ ಸಿಎಸ್‌ಕೆ 5 ವಿಕೆಟ್‌ಗೆ 136 ರನ್ ಪೇರಿಸಿತು.

ಸಾಧಾರಣ ಮೊತ್ತದ ಚೇಸಿಂಗ್ ಆರಂಭಿಸಿದ ಡೆಲ್ಲಿ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. ಎಡಗೈ ಆರಂಭಿಕ ಶಿಖರ್ ಧವನ್ (39 ರನ್) ಕೂಡ ಇನಿಂಗ್ಸ್‌ನ 15ನೇ ಓವರ್‌ನಲ್ಲಿ ಔಟಾದರು. ಕೊನೇ 5 ಓವರ್‌ಗಳಲ್ಲಿ ಡೆಲ್ಲಿಗೆ 38 ರನ್ ಅಗತ್ಯವಿದ್ದಾಗ ಜತೆಗೂಡಿದ ಶಿಮ್ರೊನ್ ಹೆಟ್ಮೆಯರ್ (28*ರನ್, 18 ಎಸೆತ, 2 ಬೌಂಡರಿ, 1 ಸಿಕ್ಸರ್) ಮತ್ತು ಅಕ್ಷರ್ ಪಟೇಲ್ (5) 7ನೇ ವಿಕೆಟ್‌ಗೆ 36 ರನ್ ಸೇರಿಸಿ ಜಯದತ್ತ ಮುನ್ನಡೆಸಿದರು.

ಡ್ವೇನ್ ಬ್ರಾವೊ ಎಸೆದ ಅಂತಿಮ ಓವರ್‌ನ ಕೊನೇ 4 ಎಸೆತಗಳಲ್ಲಿ 2 ರನ್ ಬೇಕಿದ್ದಾಗ ಅಕ್ಷರ್ ಔಟಾದರೂ, ಕಗಿಸೊ ರಬಾಡ ಮರು ಎಸೆತದಲ್ಲಿ ಬೌಂಡರಿ ಬಾರಿಸಿ ಗೆಲುವು ತಂದರು. ಹೆಟ್ಮೆಯರ್ 12 ರನ್ ಗಳಿಸಿದ್ದಾಗ ಬದಲಿ ಫೀಲ್ಡರ್ ಕೆ. ಗೌತಮ್ ಕ್ಯಾಚ್ ಕೈಚೆಲ್ಲಿದ್ದು ಸಿಎಸ್‌ಕೆಗೆ ದುಬಾರಿಯಾಯಿತು.

ಶಿಖರ್ ಧವನ್ (501) ಹಾಲಿ ಟೂರ್ನಿಯಲ್ಲಿ 500ಕ್ಕೂ ಅಧಿಕ ರನ್ ಗಳಿಸಿದ 3ನೇ ಬ್ಯಾಟರ್ ಎನಿಸಿದರು.

ಕೊನೆಗೂ ರಾಬಿನ್ ಉತ್ತಪ್ಪ ಕಣಕ್ಕೆ
ಕರ್ನಾಟಕದ ಅನುಭವಿ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಟೂರ್ನಿಯ 13ನೇ ಲೀಗ್ ಪಂದ್ಯದಲ್ಲಿ ಕೊನೆಗೂ ಅವಕಾಶ ಪಡೆದರು. ಮೊಣಕಾಲು ಸಮಸ್ಯೆ ಎದುರಿಸುತ್ತಿರುವ ಸುರೇಶ್ ರೈನಾ ಬದಲಿಗೆ ಉತ್ತಪ್ಪ ಸಿಎಸ್‌ಕೆ ಪರ ಮೊದಲ ಪಂದ್ಯವಾಡಿದರು. ಜತೆಗೆ ಸ್ಯಾಮ್ ಕರ‌್ರನ್ ಮತ್ತು ಕೆಎಂ ಆಸಿಫ್​ ಬದಲಿಗೆ ಡ್ವೇನ್ ಬ್ರಾವೊ ಮತ್ತು ದೀಪಕ್ ಚಹರ್ ಮರಳಿದರು. ಡೆಲ್ಲಿ ಪರ ಗುಜರಾತ್ ಬ್ಯಾಟರ್ ರಿಪಲ್ ಪಟೇಲ್ ಐಪಿಎಲ್‌ಗೆ ಪದಾರ್ಪಣೆ ಮಾಡಿದರು.